ಸಂಕೇಶ್ವರ ಪುರಸಭೆ ಚುಕ್ಕಾಣಿ ಬಿಜೆಪಿ ಪಾಲು

50502
Published on

ಸಂಕೇಶ್ವರ: ಕಾಂಗ್ರೆಸ್-11, ಬಿಜೆಪಿ-11, ಓರ್ವ ಪಕ್ಷೇತರ ಸದಸ್ಯ ಆಯ್ಕೆಯಾಗುವ ಮೂಲಕ ಮ್ಯಾಜಿಕ್ ಸಂಖ್ಯೆಯಲ್ಲಿ ಸಮಬಲದ ಫಲಿತಾಂಶದಿಂದ ತೀವ್ರ ಕುತೂಹಲ ಮೂಡಿಸಿದ್ದ ಸ್ಥಳೀಯ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಕತ್ತಿ ಬ್ರದರ್ಸ್‌ ಮಾರ್ಗದರ್ಶನದಲ್ಲಿ ಬಿಜೆಪಿ ಪಾಲಾಗಿವೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್, ಬಿಜೆಪಿ ಎರಡು ಕಡೆಯಿಂದ ತಲಾ ಒಂದೊಂದು ನಾಮಪತ್ರ ಸಲ್ಲಿಸಲಾಗಿತ್ತು. ಸದಸ್ಯರು ಕೈ ಎತ್ತುವ ಮೂಲಕ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಕಾಂಗ್ರೆಸ್ ಪರ 11 ಬಿಜೆಪಿ ಪರ 14 ಸದಸ್ಯರ ಬೆಂಬಲ ದೊರೆಯಿತು. ಬಿಜೆಪಿ 11 ಸದಸ್ಯರು ಹಾಗೂ ಹುಕ್ಕೇರಿ ಶಾಸಕ ಉಮೇಶ ಕತ್ತಿ, ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಪಕ್ಷೇತರ ಸದಸ್ಯ ಅಜಿತ ಕರಜಗಿ ಬೆಂಬಲದಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲಾದವು.

ಕಾಂಗ್ರೆಸ್‌ನಿಂದ ಸೇವಂತ ಕಬ್ಬೂರಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಡಾ.ಜಯಪ್ರಕಾಶ ಕರಜಗಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಆದರೆ ಬಿಜೆಪಿಗೆ ಶಾಸಕ ಹಾಗೂ ಸಂಸದರ ಮತ ಚಲಾವಣೆಯಾದ್ದರಿಂದ ಬಿಜೆಪಿ ಬಲ 14 ಕ್ಕೆ ಏರುವ ಮೂಲಕ ಪುರಸಭೆ ಕಮಲ ಪಕ್ಷದ ವಶವಾಯಿತು. ಚುನಾವಣಾ ಅಧಿಕಾರಿಯಾಗಿ ತಹಸೀಲ್ದಾರ್ ಅಶೋಕ ಗುರಾಣಿ ಕಾರ್ಯನಿರ್ವಹಿಸಿದರು.

ಪಕ್ಷೇತರರಾಗಿ ಆಯ್ಕೆಯಾಗಿದ್ದ ಪುರಸಭೆ ಸದಸ್ಯ ಅಜಿತ ಕರಜಗಿ ಸಹೋದರ ಅರ್ಜುನ ಅವರ ಪತ್ನಿಯ ತಾಯಿ ಸೀಮಾ ಹತನೂರಿ ಅವರನ್ನು ಆಯ್ಕೆಗೊಳಿಸಲು ಪಕ್ಷೇತರ ಅಭ್ಯರ್ಥಿಯ ಮತ ಸಹಕಾರಿಯಾದರೆ, ಇತ್ತ ಅಜಿತ ಚಿಕ್ಕಪ್ಪ ಡಾ.ಜಯಪ್ರಕಾಶ ಕರಜಗಿ ಎದುರು ಚುನಾವಣೆಗೆ ಸ್ಪರ್ಧಿಸಿ 3 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.

ಅಧ್ಯಕ್ಷೆ ಸೀಮಾ ಹತನೂರಿ ಮಾತನಾಡಿ, ಪಕ್ಷಾತೀತವಾಗಿ ಸಂಕೇಶ್ವರ ಪಟ್ಟಣದ ಸವಾರ್ಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು. ನೂತನ ಉಪಾಧ್ಯಕ್ಷ ಅಜಿತ ಕರಜಗಿ, ಒಳ ಚರಂಡಿ ಸಮಸ್ಯೆ ಸೇರಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗುವುದು ಎಂದರು.
ಶಾಸಕ ಉಮೇಶ ಕತ್ತಿ, ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಬಿಜೆಪಿ ಕಾಂಗ್ರೆಸ್ ಸದಸ್ಯರು, ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ ಉಪಸ್ಥಿತರಿದ್ದರು .

ಹುಕ್ಕೇರಿ ಮತಕ್ಷೇತ್ರದಲ್ಲಿರುವ ಸಂಕೇಶ್ವರ ಹಾಗೂ ಹುಕ್ಕೇರಿ ಪಟ್ಟಣಗಳನ್ನು ಮಾದರಿಯಾಗಿಸಲು ಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ-ಉಪಾಧ್ಯಕ್ಷರು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿ ಜನರ ವಿಶ್ವಾಸ ಉಳಿಸಿಕೊಳ್ಳಬೇಕು.|ಉಮೇಶ ಕತ್ತಿ ಶಾಸಕ

ಸಂಕೇಶ್ವರ ಪಟ್ಟಣದ ಸ್ವಚ್ಛತೆ ಹಾಗೂ ಸೌಂದರ್ಯ ವೃದ್ಧಿಗೆ ನಾನು ಹಾಗೂ ಸಹೋದರ ಉಮೇಶ ಕತ್ತಿ ಹೆಚ್ಚಿನ ಒತ್ತು ನೀಡಲಿದ್ದು, ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ-ಉಪಾಧ್ಯಕ್ಷರು ಸಹ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನಹರಿಸುವ ಮೂಲಕ ಜನರ ಹಿತ ಕಾಪಾಡಬೇಕು.|ರಮೇಶ ಕತ್ತಿ ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net