ಎಳ್ಳುಬೆಲ್ಲ ತಿಂದು, ಒಳ್ಳೆಯ ಮಾತನಾಡಿ

DSC_3384
Published on

ತುಮಕೂರು: ಗ್ರಾಮೀಣ ಸೊಗಡಿನ ಹಬ್ಬ ಸಂಕ್ರಾಂತಿ ಆಚರಣೆಗೆ ನಗರವಾಸಿಗಳು ಸಜ್ಜಾಗಿದಾ ಗ್ರಾಮೀಣ ಭಾಗದಲ್ಲಿ ಸಾಂಪ್ರದಾಯಿಕ ಸುಗ್ಗಿ ಸಂಭ್ರಮ ನಡೆಯಲಿದೆ.ಕಳೆದ ವರ್ಷದಲ್ಲಿ ಉತ್ತಮ ಮಳೆಯಾಗಿದ್ದು ರೈತ ಕಣದಲ್ಲಿ ಭರ್ಜರಿ ಬೆಳೆ ಬಂದಿದೆ. ಹಾಗಾಗಿ, ರೈತರು ತಮಗೆ ಹೆಗಲು ಕೊಡುವ ಎತ್ತು ಮತ್ತು ಜಾನುವಾರು ಸಿಂಗರಿಸಿ ಸಂಭ್ರಮಿಸಲು ಸಂಕ್ರಾಂತಿ ಸಾಕ್ಷಿಯಾಗಲಿದೆ.

ಈಗಾಗಲೇ ಮನೆಗಳಲ್ಲಿ ಹಬ್ಬದ ಪೂರ್ವ ಸಿದ್ಧತೆಯಾಗಿ ಹದವಾಗಿ ಹುರಿದ ಎಳ್ಳು, ಬೆಲ್ಲ, ಕೊಬ್ಬರಿ, ಹುರಿಕಡಲೆ ಮಿಶ್ರಣದ ಎಳ್ಳುಬೆಲ್ಲ ತಯಾರಾಗಿದೆ. ಮನೆ ಮನೆಗೆ ತೆರಳಿ ಎಳ್ಳು ಬೀರಿ ‘ಎಳ್ಳು ಬೆಲ್ಲ ಕೊಳ್ಳಿ, ಒಳ್ಳೊಳ್ಳೆ ಮಾತಾಡಿ’ ಎಂದು ಸಂಕ್ರಮಣದ ಸಂಭ್ರಮ ಹಂಚಿಕೊಳ್ಳಲು ತಯಾರಿ ನಡೆಸಿದ್ದಾರೆ.

ಎಳ್ಳು, ಶೇಂಗಾ, ಹುರಿಗಡಲೆ, ಒಣಕೊಬ್ಬರಿ ತುಂಡು, ಬೆಲ್ಲಢದಚ್ಚು, ಸಕ್ಕರೆ ಅಚ್ಚು, ಕಬ್ಬು ಅವರೆಕಾಯಿ, ಗೆಣಸು ಕೊಳ್ಳಲು ನಗರದ ಮಾರುಕಟ್ಟೆಯಲ್ಲಿ ಜನರು ಮುಗಿಬಿದ್ದ ದೃಶ್ಯ ಕಂಡಿಬಂದಿತು. ಹಬ್ಬದ ಮುನ್ನಾ ದಿನವಾದ ಮಂಗಳವಾರ ಅವರೆಕಾಯಿ ತೂಕ 70 ರೂ, ಕಡ್ಲೆಕಾಯಿ 1ಕೆಜಿಗೆ 70 ರೂ, ಎಳ್ಳುಬೆಲ್ಲ ಪ್ಯಾಕೆಟ್ 1ಕೆ.ಜಿ.ಗೆ 140ರೂ, ಕಬ್ಬು 1 ಜೋಡಿ ಜಲ್ಲೆಗೆ 30 ರಿಂದ 50 ರೂ., ಸಿಹಿಗೆಣಸು ಕೆಜಿಗೆ 40 ರೂ, ಸಕ್ಕರೆ ಅಚ್ಚು 100 ರೂ.ಗೆ ಮಾರಾಟವಾಗುತಿತ್ತು. ಬಾಳೆಹಣ್ಣು ಕೆಜಿಗೆ 40-50 ರೂ. ಹೂವು-ಹಣ್ಣು, ತರಕಾರಿ ಬೆಲೆ ಕೊಂಚ ಕಡಿಮೆಯಾಗಿತ್ತು.

ಮಹಿಳೆಯರಿಗೆ ಬಾಗಿನ ನೀಡಿ ಶುಭ ಕೋರಿದ ಶಾಸಕ ಗೌರಿಶಂಕರ್: ಸಂಕ್ರಾಂತಿ ಹಬ್ಬದ ಅಂಗವಾಗಿ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ 3 ಸಾವಿರ ಮಹಿಳೆಯರಿಗೆ ಬಾಗಿನ, ಒಂದು ಲಾರಿ ಲೋಡ್ ಕಬ್ಬು ಹಾಗು ಎಳ್ಳು ಬೆಲ್ಲ ವಿತರಿಸಿ ಶುಭಕೋರಿದರು.

ತಾಲೂಕಿನ ಮಲ್ಲಸಂದ್ರದಲ್ಲಿ ಗ್ರಾಮಾಂತರ ಜೆಡಿಎಸ್ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಕ್ಷೇತ್ರದ ಮಹಿಳೆಯರಿಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಾಗಿನ ನೀಡಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲ ಎಲ್ಲ ಸಂದರ್ಭದಲ್ಲಿ ಕ್ಷೇತ್ರದ ಸಹೋೀದರಿಯರು, ತಾಯಂದಿ ರೊಂದಿಗೆ ಇರುವುದಕ್ಕಾಗಿಯೇ ಬಾಗಿನ ನೀಡುತ್ತಿರುವುದಾಗಿ ಹೇಳಿದರು.

ಅಧಿಕಾರ ಇರಲಿ ಬಿಡಲಿ, ನಾನು ಬದುಕಿರುವವರೆಗೂ ಗ್ರಾಮಾಂತರ ಕ್ಷೇತ್ರದ ಹೆಣ್ಣು ಮಕ್ಕಳಿಗೆ ಬಾಗಿನ ನೀಡುತ್ತೇನೆ. ಅಧಿಕಾರ ನೀಡಿರುವ ನಿಮಗೆ ಕೆಟ್ಟ ಹೆಸರು ತರುವಂತಹ ಕೆಲಸ ಮಾಡುವುದಿಲ್ಲ ಎಂದರು.

ಕಳೆದ ಒಂದೂವರೆ ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ನನಗೆ ತೃಪ್ತಿ ಇಲ್ಲ. ಮುಂದಿನ ಮೂರುವರೆ ವರ್ಷದಲ್ಲಿ ಚುನಾವಣೆಗೆ ಮುನ್ನ ನೀಡಿದ್ದ ಭರವಸೆ ಈಡೇರಿಸುತ್ತೇನೆ. ಒಂದೂವರೆ ವರ್ಷದಲ್ಲಿ ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ಅಭಿವೃದ್ಧಿ ಮಾಡುತ್ತೇನೆ ಎಂದರು.

ಗ್ರಾಮಾಂತರ ಕ್ಷೇತ್ರದಲ್ಲಿ ಈಗ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ನನೆಗುದಿಗೆ ಬಿದ್ದ ಕಾಮಗಾರಿಗಳನ್ನು 400 ಕೋಟಿ ರೂ., ಅನುದಾನದಲ್ಲಿ ಚಾಲನೆ ನೀಡಲಾಗಿದೆ. ಕೆರೆಗಳಿಗೆ ನೀರು ಹರಿಸಿದ್ದರಿಂದ ಕೊಳವೆ ಬಾವಿಗಳು ಮರುಪೂರಣಗೊಂಡಿವೆ ಎಂದು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತ್ ತಿಳಿಸಿದರು.

ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ, ತಾಲೂಕು ಯುವ ಘಟಕದ ಅಧ್ಯಕ್ಷ ಗೂಳೂರು ಪುಟ್ಟರಾಜು, ಮಾಜಿ ಎಪಿಎಂಸಿ ಅಧ್ಯಕ್ಷ ವೈ.ಟಿ.ನಾಗರಾಜು, ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್,ಜಿಲ್ಲಾ ಕಾರ್ಯಾಧ್ಯಕ್ಷ ಸುವರ್ಣ ಗಿರಿಕುಮಾರ್, ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ಮಾಜಿ ಎಪಿಎಂಸಿ ಸದಸ್ಯ ಕಾಮೇಗೌಡ, ವಿಜಯಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net