ಸಂಕ್ರಾಂತಿ ಸಡಗರಕ್ಕೆ ವಾರಾಂತ್ಯ ಕರ್ಫ್ಯೂ ಬ್ರೇಕ್

DSC_5752
Published on

ತುಮಕೂರು : ಕರೊನಾ ಕಾರ್ಮೋಡ, ವಾರಾಂತ್ಯ ಕರ್ಫ್ಯೂ ಸಂಕ್ರಾಂತಿ ಸಡಗರಕ್ಕೆ ತಡೆಯೊಡ್ಡಿತು. ಎರಡನೇ ವಾರದ ವೀಕೆಂಡ್ ಕರ್ಫ್ಯೂ ಮುಂದುವರೆಯಿತು. ಕರೊನಾ ಮಹಾಮಾರಿ ಆರ್ಭಟ ದಿನೇದಿನೇ ಹೆಚ್ಚಾಗಿದ್ದು ಸಹಜವಾಗಿ ಕರ್ಫ್ಯೂ ವೇಳೆ ಜನರು ಮನೆಯಲ್ಲೇ ಉಳಿದರಾದರೂ ಕೆಲವರ ಅನಗತ್ಯ ಓಡಾಟ ಇದ್ದೇ ಇತ್ತು. ಜಿಲ್ಲಾಕೇಂದ್ರ ತುಮಕೂರು ಸೇರಿದಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಹಬ್ಬದ ಆಚರಣೆ ನಡುವೆಯೂ ಜನಜೀವನ ಬಹುತೇಕ ಸ್ತಬ್ದಗೊಂಡಿತ್ತು. ಅಗತ್ಯವಸ್ತುಗಳ ಮಾರಾಟ ಮಳಿಗೆಗಳು ಹೊರತುಪಡಿಸಿ ಇನ್ನುಳಿದ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿದ್ದವು. ಸಂಕ್ರಾಂತಿ ಹಿನ್ನೆಲೆಯಲ್ಲಿ ಹೋಟೆಲ್, ದಿನಸಿ ಅಂಗಡಿಗಳು ಮುಚ್ಚಿದ್ದವು.

ಸಾಮೂಹಿಕ ಸಂಕ್ರಾಂತಿಗೆ ಬ್ರೇಕ್: ಸಂಕ್ರಾಂತಿ ಸಾಮೂಹಿಕ ಆಚರಣೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ತಡೆಯೊಡ್ಡಿತ್ತು. ಹಾಗಾಗಿ, ಮನೆಯವರೆಲ್ಲಾ ಸೇರಿ ಮನೆಗಳಲ್ಲೇ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರೆ, ಅಕ್ಕಪಕ್ಕದ ಮನೆಗಳಿಗೆ ತೆರಳಿ ಹೆಣ್ಣುಮಕ್ಕಳು ಎಳ್ಳುಬೆಲ್ಲ ಬೀರಿ ವಿಶೇಷವಾಗಿ ಮಿಂದರು. ಇನ್ನೂ ಗ್ರಾಮೀಣಭಾಗದಲ್ಲಿ ಸುಗ್ಗಿ ಸಂಭ್ರಮ ಹೆಚ್ಚಿತ್ತು. ನಗರದ ಬಹುತೇಕ ದೇವಸ್ಥಾನಗಳಲ್ಲಿ ಜನಜಂಗುಳಿಯಿಂದ ಕಾಣಲಿಲ್ಲ.

ಶ್ರೀಗಳ ಗದ್ದುಗೆಗೆ ಅಲಂಕಾರ: ಶಿವಕುಮಾರ ಶ್ರೀಗಳ ಗದ್ದುಗೆಗೆ ಸಂಕ್ರಾಂತಿ ಹಿನ್ನೆಲೆಯಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಕಡಲೆಕಾಯಿ, ಅವರೆಕಾಯಿ, ಗೆಣಸು ಕಬ್ಬು, ಎಳ್ಳುಬೆಲ್ಲ ಅಲಂಕಾರ ವಿಶೇಷವಾಗಿತ್ತು.

ಕರ್ಫ್ಯೂ ರಿಲ್ಯಾಕ್ಸ್ : ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಅನಗತ್ಯವಾಗಿ ಸಂಚರಿಸುತ್ತಿರುವ ವಾಹನಗಳ ತಪಾಸಣೆ ನಡೆಸಿ, ದಂಡ ಹಾಕಿದರು. ಸಂಕ್ರಾಂತಿ ಹಬ್ಬ ಇದ್ದರಿಂದ ಪೊಲೀಸರು ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್ ಕೊಟ್ಟಿದ್ದರು. ನಗರದ ಒಳಭಾಗದ ಬಹುತೇಕ ರಸ್ತೆಗಳಲ್ಲಿ ಓಡಾಡಲು ಯಾವುದೇ ಅಡ್ಡಿಪಡಿಸಲಿಲ್ಲ.

ವಾಹನ ಸಂಚಾರ ವಿರಳ : ಹಬ್ಬದ ಹಿನ್ನೆಲೆಯಲ್ಲಿ ಜನರ ಓಡಾಟ ಕಡಿಮೆ ಇದ್ದದ್ದರಿಂದ ಇನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ಹಾಗೂ ಖಾಸಗಿ ಬಸ್‌ಗಳು ಸಂಚಾರವೂ ವಿರಳವಾಗಿತ್ತು. ಸಾರಿಗೆ ಸಿಬ್ಬಂದಿ ಜನರಿಗಾಗಿ ನಿಲ್ದಾಣದಲ್ಲಿ ಕಾಯುವಂತಾಯಿತು. ಬಸ್ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net