ನಿತ್ಯಸಚಿವ ಕೆ.ವಿ.ಶಂಕರಗೌಡ ಸಾಂಸ್ಕೃತಿಕ ಚಿಂತಕ: ವಿಚಾರವಾದಿ ರಮೇಶ್‌ಗೌಡ ಹೇಳಿಕೆ

Sankara Niranthara program Mandya
Published on

ಮಂಡ್ಯ: ನಾಟಕ ಪ್ರದರ್ಶನ ಮಾಡಿ ಸಂಗ್ರಹಿಸಿದ ಹಣದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿಸಿದ ಕೆ.ವಿ.ಶಂಕರಗೌಡರು ನಿತ್ಯ ಸಚಿವ ಎಂದು ಕುವೆಂಪು ಅವರಿಂದ ಬಿರುದು ಪಡೆದರು. ಶಿಕ್ಷಣ ಸಚಿವ, ಸಹಕಾರಿ ಧುರೀಣ, ಸಾಂಸ್ಕೃತಿಕ ಚಿಂತಕರಾಗಿ ಕೆವಿಎಸ್ ಹೆಸರು ವಾಸಿಯಾಗಿದ್ದರು ಎಂದು ಚಿಂತಕ ರಮೇಶ್‌ಗೌಡ ಶ್ಲಾಘಿಸಿದರು.

ತಾಲೂಕಿನ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಚಿತ್ರಕೂಟದ ವತಿಯಿಂದ ನಿತ್ಯ ಸಚಿವ ಕೆ.ವಿ.ಶಂಕರಗೌಡ ಮತ್ತು ನಟ ಶಂಕರ್‌ನಾಗ್ ನೆನಪಿನಲ್ಲಿ ಆಯೋಜಿಸಿದ್ದ ಶಂಕರ ನಿರಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಂಕರಗೌಡರು ರಂಗಭೂಮಿ ಮೂಲಕ ನಾಗಮಂಗಲ, ಪಾಂಡವಪುರ ಸೇರಿದಂತೆ ಹಲವು ಕಡೆ ನಾಟಕ ಪ್ರದರ್ಶನ ಮಾಡಿ ಬಂದ ಹಣದಿಂದ ಶಿಕ್ಷಣ ಸಂಸ್ಥೆಗೆ ವಿನಿಯೋಗಿಸಿದರು. ವಿದ್ಯಾರ್ಥಿಗಳ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಇಂಜಿನಿಯರಿಂಗ್ ಕಾಲೇಜು ಕಟ್ಟಿಸಿ ನೆರವಾದರು ಎಂದು ಸ್ಮರಿಸಿದರು.

ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎನ್.ವಿನಯ್‌ಕುಮಾರ್ ಮಾತನಾಡಿ, ಶಂಕರ್‌ನಾಗ್ ಎಂದರೆ ಪಾದರಸವಿದ್ದಂತೆ. ಸತ್ತಾಗ ಘೋರಿಯಲ್ಲಿ ಮಲಗುವುದು ಇದ್ದೇ ಇರುತ್ತದೆ, ಬದುಕಿದ್ದಾಗ ಎದ್ದೇಳಿ ಕೆಲಸ ಮಾಡಿ ಸಮಾಜದಲ್ಲಿ ಸಾಧನೆ ಮಾಡಿ ಎಂಬ ಕರೆ ನೀಡುತ್ತಿದ್ದ ಸಮಯದ ಜ್ಞಾನ ಇಟ್ಟುಕೊಂಡಿದ್ದ ಶಂಕರ್‌ನಾಗ್ ಅವರು ಇತರೆ ನಟರಿಗೂ ಸ್ಫೂರ್ತಿಯಾಗಿದ್ದರು ಎಂದು ತಿಳಿಸಿದರು.

ಬೆಂಗಳೂರಿನ ಮೆಟ್ರೋ ಬಗ್ಗೆ ಅವರ ಕಾಲಘಟ್ಟದಲ್ಲಿಯೇ ಆಲೋಚನೆ ಹೊಂದುವ ಮೂಲಕ ಸಮಾಜ ಸೇವೆಯ ಕಾಳಜಿ ತೋರಿದ ಕನ್ನಡ ಚಲಚಿತ್ರ ಹೆಸರುವಾಸಿ ನಟ. ತಮ್ಮ ಹಣ ಖರ್ಚು ಮಾಡಿ ಪ್ರಾಜೆಕ್ಟ್ ಮಾಡಿ ಚರ್ಚೆ ನಡೆಸಿದ್ದರು. ಕರ್ನಾಟಕದಲ್ಲಿ ಸಂಗೀತ ಸ್ಟೂಡಿಯೋ ಮಾಡಿ ರೆಕಾರ್ಡಿಂಗ್ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು ಎಂದರು.

ಕರುನಾಡು ಸೇವಕರ ಸಂಘಟನೆ ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಮುಖ್ಯ ಶಿಕ್ಷಕ ದೇವರಾಜು, ಜನಶಕ್ತಿ ಸಂಘಟನೆ ಪೂರ್ಣಿಮಾ ಇತರರಿದ್ದರು. ಇದೇ ವೇಳೆ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳು ಶ್ರಮದಾನ, ಶಾಲಾ ಕೊಠಡಿಗಳ ನವೀಕರಣ, ಸುಣ್ಣಬಣ್ಣ ಬಳಿಯುವುದು, ಶಾಲಾ ಆವರಣದಲ್ಲಿ ಸಸಿ ನೆಡುವ ಚಟುವಟಿಕೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net