ಪೀಠ ಮುಕ್ತಿಗಾಗಿ ಶಂಕರ ಮಠದಲ್ಲಿ 1001 ದೀಪ ಬೆಳಗಿಸಿದ ಶ್ರೀರಾಮ ಸೇನೆ ಕಾರ್ಯಕರ್ತರು

web 3
Published on

ಚಿಕ್ಕಮಗಳೂರು: ದತ್ತಪೀಠ ಮುಕ್ತಿಗಾಗಿ ಶ್ರೀರಾಮ ಸೇನೆ ಮುಖಂಡರು ದತ್ತಪೀಠದಿಂದ ಹಚ್ಚಿ ತಂದ ದೀಪದ ಮೂಲಕ ನಗರದ ಮನೆಗಳಲ್ಲಿ ಹಾಗೂ ಶ್ರೀ ಶಂಕರ ಮಠದಲ್ಲಿ ದೀಪ ಹಚ್ಚುವ ಮೂಲಕ ದತ್ತ ದೀಪೋತ್ಸವ ಆಚರಿಸಿದರು.

ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹಾಗೂ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರು ಸೋಮವಾರ ದತ್ತಪೀಠಕ್ಕೆ ತೆರಳಿ ಗುಹಾಂತರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅಲ್ಲಿಂದಲೇ ದೀಪವನ್ನು ಹಚ್ಚಿ ನಗರಕ್ಕೆ ತಂದರು.

ದತ್ತಪೀಠದಿಂದ ತಂದಂತಹ ದೀಪದಲ್ಲಿ ವಿಜಯಪುರದ ವಿವಿಧ ಮನೆಗಳಿಗೆ ತೆರಳಿ ದೀಪಹಚ್ಚುವ ಮೂಲಕ ದತ್ತ ದೀಪೋತ್ಸವ ಆಚರಿಸಿದರು. ನಂತರ ಬಸವನಹಳ್ಳಿ ಶ್ರೀ ಶಂಕರ ಮಠದಲ್ಲಿ 1001 ದೀಪ ಹಚ್ಚಿ ದತ್ತಪೀಠ ಮುಕ್ತಿಗೆ ಪ್ರಾರ್ಥಿಸಿದರು.

ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಮಾತನಾಡಿ, ದತ್ತ ದೀಪೋತ್ಸವದ ಅಂಗವಾಗಿ ನಗರದ ವಿಜಯಪುರದಲ್ಲಿ 50ಕ್ಕೂ ಹೆಚ್ಚು ಮನೆಗಳ ದೀಪ ಹಚ್ಚಲಾಯಿತು. ಮನೆ ಮುಂದೆ ರಂಗವಲ್ಲಿ ಹಾಕಿ ಮಾತೆಯರು ಸ್ವಾಗತಿಸಿ ಅಕ್ಕಿ, ಬೆಲ್ಲ ಪಡಿ ಹಾಕಿದರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net