ಅಭಿವೃದ್ಧಿಯಲ್ಲಿ ವೇಗ ಪಡೆದ ಭಾರತ, ವರೂರಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಸಚಿವ ಜೋಶಿ ಅಭಿಮತ

IMG_20231209_212241_820-1.jpg
Published on

ಹುಬ್ಬಳ್ಳಿ: ಅಭಿವೃದ್ಧಿ ಪಥದಲ್ಲಿ ವೇಗವಾಗಿ ಸಾಗುತ್ತಿರುವ ಭಾರತವು ಶ್ರೀ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಸೇರ್ಪಡೆಯಾಗಲಿದೆ, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಕಲ್ಪ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ತಾಲೂಕಿನ ವರೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

2047ರೊಳಗೆ ಅಭಿವೃದ್ಧಿ ಹೊಂದಿದ ದೇಶವಾಗಿಸಲು ನಾವು ಬದ್ಧರಾಗಿದ್ದೇವೆ, ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವಂತಾಗಲು ಯೋಜನೆ ರೂಪಿಸಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯು ಜನರ ಆರೋಗ್ಯ ರಕ್ಷಣೆ ಮಾಡಲಿದೆ. ವ್ಯಾಪಾರ ಆರಂಭಿಸಲು ಮುದ್ರಾ ಯೋಜನೆಯು ನೆರವಿಗೆ ಬರಲಿದೆ. ಬ್ಯಾಂಕಿನಿಂದ ಆಥಿರ್ಕ ಸಹಾಯಧನ ಕೂಡಲೇ ದೊರೆಯಲಿದೆ. ಇಂತಹ ಹಲವು ಯೋಜನೆಗಳು ಅಭಿವೃದ್ಧಿಯ ವೇಗ ಹೆಚ್ಚಿಸಲಿವೆ ಎಂದರು.

ಉಜ್ವಲ ಯೋಜನೆ, ಪೋಷಣ ಅಭಿಯಾನ, ಸ್ವ ಸಹಾಯ ಗುಂಪುಗಳಿಗೆ ಸಾಲ ಮಂಜೂರಾತಿ, ಆಯುಷ್ಮಾನ್ ಭಾರತ, ಕಿಸಾನ್ ಕ್ರೆಡಿಟ್ ಕಾರ್ಡ್, ಮುದ್ರಾ, ಸ್ವನಿಧಿ, ಕಿಸಾನ್ ಸಮ್ಮಾನ ಮತ್ತು ಪ್ರಧಾನ ಮಂತ್ರಿಯವರ ಆವಾಸ ಯೋಜನೆ ಮುಂತಾದ ಜನಪರ ಯೋಜನೆಗಳ ನೂರಾರು ಫಲಾನುಭವಿಗಳು ಭಾಗವಹಿಸಿದ್ದರು. ತಮ್ಮ ಅನುಭವಗಳನ್ನು ಹಂಚಿಕೊಂಡರು.

ಆರೋಗ್ಯ ಇಲಾಖೆ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು. ಸಂಕೇತ ತಂಡದವರು ಡ್ರೋಣ್ ಪ್ರದರ್ಶನ ನೀಡಿದರು.

ಶಾಸಕರಾದ ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಕೇಂದ್ರ ವಾರ್ತಾ ಶಾಖೆಯ ಹೆಚ್ಚುವರಿ ಮಹಾ ನಿರ್ದೇಶಕ ಎಸ್.ಜಿ. ರವೀಂದ್ರ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಭಂಡಿವಾಡ, ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ವಡ್ಡೆ ಶ್ರೀಹರಿ, ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಹಿರೇಮಠ, ವರೂರ ಗ್ರಾಮ ಪಂಚಾಯಿತಿ ಅಧ್ಯೆ ಲಕ್ಷ್ಮವ್ವ ಮ್ಯಾಗಡಿ, ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಧಾನಿ ಸಂವಾದ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧೆಡೆಯ ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸಿದರು. ತುಮಕೂರಿನ ಮುಖೇಶ ಅವರು ಪ್ರಧಾನಮಂತ್ರಿ ಅವರೊಂದಿಗೆ ಮಾತನಾಡಿ, ಮುದ್ರಾ ಯೋಜನೆಯಡಿ 4.50 ಲಕ್ಷ ರೂ. ಲೋನ್ ತೆಗೆದುಕೊಂಡು ಕೆಲಸ ಪ್ರಾರಂಭಿಸಿದ್ದೇನೆ. ಈಗ 3 ಜನರಿಗೆ ಉದ್ಯೋಗ ನೀಡಿದ್ದೇನೆ ಎಂದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳೆಯಿರಿ, ಯುವ ಜನರಿಗೆ ಮತ್ತಷ್ಟು ಸಹಾಯ ಮಾಡಿ ಎಂದು ಪ್ರಧಾನಿ ಮೋದಿ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net