

ಹುಬ್ಬಳ್ಳಿ: ಇಲ್ಲಿಯ ಎಸ್.ಎಸ್. ಶೆಟ್ಟರ್ ಫೌಂಡೇಷನ್ ವತಿಯಿಂದ ಆನಂದನಗರ ರಸ್ತೆಯಲ್ಲಿರುವ ವಿಶ್ವ ಹಿಂದೂ ಪರಿಷತ್ ಸಂಚಾಲಿತ ಗೋಶಾಲೆಗೆ ಭೇಟಿ ನೀಡಿದ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್ ಗೋಪೂಜೆ ನೆರವೇರಿಸಿ ಸೇವಾ ಕಾರ್ಯ ಕೈಗೊಂಡರು.
ಗೋಶಾಲೆಯಲ್ಲಿ ಕಸಗೂಡಿಸಿ ಸ್ವಚ್ಛ ಮಾಡಿ, ಕೊಟ್ಟಿಗೆಗೆ ನೀರು ಹೊಡೆದರು. ಜಾನುವಾರುಗಳಿಗೆ ಮೇವು ಹಾಕಿದರು. ಗೋಪೂಜೆ ನೆರವೇರಿಸಿ ಅವುಗಳಿಗೆ ಆಹಾರ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್ ಅವರು, ಗೋವುಗಳು ತಾಯಿಗೆ ಸಮಾನ, ಸನಾತನ ಸಂಸ್ಕೃತಿಯಲ್ಲಿ ಗೋವುಗಳಿಗೆ ಪೂಜ್ಯನಿಯ ಸ್ಥಾನವಿದೆ. ಮುಕ್ಕೋಟಿ ದೇವರು ಗೋವಿನಲ್ಲಿ ಇರುವರು ಎಂಬ ಪ್ರತಿತಿ ಇದೆ. ತಾಯಿ ಮಗುವಿಗೆ ಹಾಲುಣಿಸಿ ಬೆಳೆಸಿದರೆ ಗೋವುಗಳು ಮನುಷ್ಯನನ್ನು ಆತನ ಜೀವಿತಾವಧಿಯವರೆಗೂ ಹಾಲು ಕೊಟ್ಟು ಕಾಪಾಡುತ್ತವೆ. ತಾಯಿಗೆ ನೀಡುವ ಗೌರವ ಪ್ರೀತಿ, ದೇವರ ಮೇಲಿರುವ ಭಕ್ತಿ ಗೋವುಗಳ ಬಗ್ಗೆಯೂ ಇರಬೇಕು. ನಾವೆಲ್ಲರೂ ಗೋವುಗಳ ರಕ್ಷಣೆಯ ಸಂಕಲ್ಪ ಮಾಡೋಣ ಎಂದು ಹೇಳಿದರು.
ಫೌಂಡೇಷನ್ ಸದಸ್ಯರಾದ ವಿನೋದ ಬಂಕಾಪುರ, ಆದರ್ಶ ಉಪ್ಪಿನ್, ಭಾರತಿ ಟಪಾಲ್, ಶಿವಪ್ಪ ನಾಗೋಜಿ, ಜಯಶ್ರೀ ನಿಂಬಗಿರ್, ಶಿವಕುಮಾರ ಕೊಪ್ಪದ, ಮಂಜುನಾಥ ಬ್ಯಾಡಗಿ, ನಿಂಗಪ್ಪ ಸೌದತ್ತಿ, ಸ್ಥಳಿಯ ಮುಖಂಡರು ಉಪಸ್ಥಿತರಿದ್ದರು.