ಪ್ರತಿಭೆ ಗುರುತಿಸುವ ಉತ್ಸವ ಸಂಕಲ್ಪ

JSS NEW
Published on

ಧಾರವಾಡ : ಶಿಕ್ಷಣದಲ್ಲಿ ಅಂಕ ಮಾತ್ರ ಮುಖ್ಯವಲ್ಲ. ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿ ಅವರಿಗೆ ಸೂಕ್ತ ವೇದಿಕೆ ನೀಡಬೇಕಾದದ್ದು ಅತೀ ಅವಶ್ಯಕ. ಇಂತಹ ಕಾರ್ಯವನ್ನು ಜೆಎಸ್​ಎಸ್ ಕಾಲೇಜಿನ ಸಂಕಲ್ಪ ಉತ್ಸವ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 75ನೇ ಜನ್ಮದಿನ ನಿಮಿತ್ತ ನಗರದ ಜೆಎಸ್​ಎಸ್​ನ ಎಸ್​ಎಸ್​ಎಂಐ ಕಾಲೇಜು 2 ದಿನಗಳ ಕಾಲ ಏರ್ಪಡಿಸಿರುವ ರಾಜ್ಯ ಮಟ್ಟದ ಸಂಕಲ್ಪ-2023ಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿ ವಿದ್ಯಾರ್ಥಿಗೆ ಒಂದಿಲ್ಲ ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿದರೆ ವಿದ್ಯಾರ್ಥಿಗಳು ಉದಯೋನ್ಮುಖರಾಗಿ ಹೊರಹೊಮ್ಮುತ್ತಾರೆ. ಅಂತಹ ಕಾರ್ಯಕ್ಕೆ ಸೂಕ್ತ ವೇದಿಕೆಯೇ ಸಂಕಲ್ಪ-2023. ಪ್ರತಿಭೆಗಳಿಂದ ವ್ಯಕ್ತಿಯು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಯಾವ ಹಂತಕ್ಕೂ ಹೋಗಬಹುದು. ಯುವಕರೇ ಭಾರತದ ಶಕ್ತಿ. ಭಾರತದಲ್ಲಿ ಶೇ. 60ರಷ್ಟು ಯುವಕರೇ ಇರುವುದರಿಂದ ಮುಂದಿನ ದಿನಗಳಲ್ಲಿ ಭಾರತ ವಿಶ್ವ ಗುರುವಾಗಿ ಹೊರಹೊಮ್ಮಲಿದೆ. ನೌಕರರಿಗಾಗಿ ಹಂಬಲಿಸದೆ ಸ್ವ-ಉದ್ಯೋಗ ಮಾಡುವುದರ ಜತೆಗೆ ಇನ್ನಿತರರಿಗೆ ಉದ್ಯೋಗಾವಕಾಶ ಕಲ್ಪಿಸಿ ಎಂದರು.

ಸಂಗೀತಗಾರ ವಾಸುಕಿ ವೈಭವ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಗೆ ಸೂಕ್ತ ಅವಕಾಶ ಸಿಗುವುದು ಇಂದಿನ ಅಗತ್ಯ. ನಿಷ್ಕಲ್ಮಷ ಪ್ರೀತಿ ತೋರುವುದು ಉತ್ತರ ಕರ್ನಾಟಕದ ಜನರ ಸ್ವಭಾವ. ವಿದ್ಯಾರ್ಥಿಗಳಿಗಾಗಿ ಮನಸ್ಸಿಂದ ಯಾರೂ ಕೆಟ್ಟವರಲ್ಲ ಎಂದ ಅವರು, ಸಂಗೀತದ ಮೂಲಕ ಮಕ್ಕಳನ್ನು ರಂಜಿಸಿದರು.

ಅಧ್ಯಕ್ಷತೆ ವಹಿಸಿದ್ದ ಜೆಎಸ್​ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಮಾತನಾಡಿ, ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಯಾವ ಸಾಧನೆಯನ್ನಾದರೂ ಮಾಡಬಹುದು. ರಾಜ್ಯದ 103ಕ್ಕೂ ಹೆಚ್ಚು ವಿವಿಧ ಕಾಲೇಜಿನಿಂದ 1,100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತಸ ತಂದಿದೆ. ಸಂಕಲ್ಪ ಉತ್ಸವವು ಪ್ರತಿಭೆ ಹುಡುಕುವ ಮತ್ತು ಗುರುತಿಸುವ ವೇದಿಕೆಯಾಗಿದ್ದು, ಇದರ ಸದುಪಯೋಗ ಪಡೆಯಬೇಕು ಎಂದರು.

ಕಾಲೇಜಿನ ಉಪಪ್ರಾಚಾರ್ಯ ಡಾ. ಸೂರಜ ಜೈನ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಮಾ ಭಟ್ಟ ಹಾಗೂ ಸೌಮ್ಯ ಸಿಂಗ್ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ಸನ್ಮಾನ ಪತ್ರ ವಾಚಿಸಿದರು. ಪ್ರಾಚಾರ್ಯ ಡಾ. ವೈ. ಜಯಮ್ಮ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net