ಸಂಜೀವಿನಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ

udp-15-sanjivini
Published on

ಉಡುಪಿ: ಸಂಜೀವಿನಿ ಸ್ವ ಸಹಾಯ ಗುಂಪು ಹಾಗೂ ಒಕ್ಕೂಟಗಳ ಬಲವರ್ಧನೆ, ಸಂಜೀವಿನಿ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ವಿವಿಧ ಸ್ವ ಉದ್ಯೋಗ ಹಾಗೂ ಪ್ರವಾಸೋದ್ಯಮ ಚಟುವಟಿಕೆ, ಹಣಕಾಸು ಸೇರ್ಪಡೆ ಬಗ್ಗೆ ಅಗತ್ಯಕ್ರಮ ವಹಿಸುವಂತೆ ಸಂಸದ ಕೋಟ ಶ್ರೀನಿವಾಸ್​ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ನಡೆದ ಸಂಜೀವಿನಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಯೋಜನಾ ನಿರ್ದೇಶಕ ವಿಜಯ್​ ಕುಮಾರ್​, ಜಿಲ್ಲಾ ಲೀಡ್​ ಬ್ಯಾಂಕ್​ ವ್ಯವಸ್ಥಾಪಕ ಹರೀಶ್​, ವಿಷಯ ನಿರ್ವಹಕ ಅನಂತಕೃಷ್ಣ, ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಅವಿನಾಶ್​, ಡಾ. ಸೌಮ್ಯ ಕುಮಾರಿ, ಯತೀಶ್​, ರವಿ, ಶಿವಾನಂದ್​ ಉಪಸ್ಥಿತರಿದ್ದರು.

ದೀಪಾವಳಿ ಗಿಫ್ಟ್​ ಬಾಕ್ಸ್​ ಬಿಡುಗಡೆ

ಅಕ್ಕ ಸಂಜೀವಿನಿ ಅಂಗಡಿ ಮೂಲಕ ತಯಾರಿಸಿದ ದೀಪಾವಳಿ ಗಿಫ್ಟ್​ ಬಾಕ್ಸ್​ಗಳನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಯಶ್​ ಪಾಲ್​ ಸುವರ್ಣ, ಗುರ್ಮೆ ಸುರೇಶ್​ ಶೆಟ್ಟಿ, ಕಿರಣ್​ ಕುಮಾರ್​ ಕೊಡ್ಗಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಸಹಾಯಕ ಆಯುಕ್ತೆ ರಶ್ಮಿ, ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​, ಅಪರ ಜಿಲ್ಲಾಧಿಕಾರಿ ಅಬಿದ್​ ಗದ್ಯಾಳ್​, ಯೋಜನಾ ನಿರ್ದೇಶಕ ವಿಜಯ್​ ಕುಮಾರ್​ , ಕಾಪು ತಾಲೂಕು ಪಂಚಾಯತ್​ ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್​ ಡಿಸಿಲ್ವಾ ಉಪಸ್ಥಿತರಿದ್ದರು.

ಕಟಪಾಡಿ ಅಕ್ಕ ಸಂಜೀವಿನಿ ಅಂಗಡಿಯ ಡ್ರೈ ಫ್ರೂಟ್ಸ್​ ಗಿಫ್ಟ್​ ಬಾಕ್ಸ್​, ಪಡುಬಿದ್ರೆ ಹಾಗೂ ಶಿರ್ವ ಅಕ್ಕ ಅಂಗಡಿಯ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಲಡ್ಡು, ಸ್ವೀಟ್ಸ್​, ಸಿಹಿ ತಿನಿಸುಗಳು ಹಾಗೂ ಬೆಳಪು ಅಕ್ಕ ಅಂಗಡಿಯ ಗೋ ಉತ್ಪನ್ನಗಳಿಂದ ತಯಾರಿಸಿದ ಪೂಜಾ ಸಾಮಗ್ರಿಗಳ ಬಾಕ್ಸ್​ ದೀಪಾವಳಿಯ ಉಡುಗೊರೆ ನೀಡಲು ವಿನ್ಯಾಸಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net