ಸ್ವ-ಸಹಾಯ ಸಂಘ ಉತ್ಪನ್ನಗಳು ಗುಣಮಟ್ಟ ಕಾಯ್ದುಗೊಳ್ಳಬೇಕು

udp-7-dc malpe
Published on

ಉಡುಪಿ: ಸ್ವ-ಸಹಾಯ ಸಂಘಗಳ ಉತ್ಪನ್ನಗಳು ಗುಣಮಟ್ಟ ಕಾಯ್ದುಕೊಂಡರೆ ಮಾತ್ರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದು ಹೆಚ್ಚಿನ ಆರ್ಥಿಕ ಲಾಭ ಗಳಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

ಗುರುವಾರ ಮಲ್ಪೆ ಬೀಚ್​ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ- ವತಿಯಿಂದ ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.

ಹೆಣ್ಣುಮಕ್ಕಳು ಸ್ವ-ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಸ್ವ-ಸಹಾಯ ಸಂಘಗಳು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಮಾಡುವುದೇ ಸವಾಲು. ಹೀಗಾಗಿ ಸ್ವಚ್ಛ ಹಾಗೂ ಗುಣಮಟ್ಟದೊಂದಿಗೆ ಉತ್ಪನ್ನಗಳಿದ್ದರೆ ಜನರು ಮಾರುಕಟ್ಟೆಯಲ್ಲಿ ಅದನ್ನು ಕೇಳಿ ಪಡೆಯುತ್ತಾರೆ. ಉತ್ಪನ್ನಗಳು ಚೆನ್ನಾಗಿದ್ದಲ್ಲಿ ಆನ್​ಲೈನ್​ ಮೂಲಕ ಗ್ರಾಹಕರು ಖರೀದಿಸಲು ಮುಂದಾಗುತ್ತಾರೆ. ಸ್ವ-ಸಹಾಯ ಸಂಘಗಳು ಪ್ರಾರಂಭಿಕ ಹಂತದಲ್ಲಿ ಮುತುವರ್ಜಿ ವಹಿಸಿ ಉತ್ತಮ ಉತ್ಪನ್ನಗಳು ಉತ್ಪಾದಿಸಿ, ಮಾರಾಟ ಮಾಡಿದರೆ ಮಾರುಕಟ್ಟೆಯಲ್ಲಿ ಯಶಸ್ಸು ಸಾಧ್ಯ ಎಂದರು.

ಸಂಜೀವಿನಿ ಜಿಲ್ಲಾ ವ್ಯವಸ್ಥಾಪಕ ಅವಿನಾಶ್​ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರು ತಯಾರಿಸಿದ ವಸ್ತುಗಳ ಮಾರಾಟ ಹಾಗೂ ಪ್ರದರ್ಶಕ್ಕಾಗಿ ಒಟ್ಟು 40 ಮಳಿಗೆಗಳನ್ನು ತೆರೆದಿದ್ದು, ಗೃಹ ಉಪಯೋಗಿ ವಸ್ತುಗಳು, ಕರಕುಶಲ ವಸ್ತುಗಳು, ಟೆರೇಕೋಟಾ ವಸ್ತುಗಳು, ಕೃತಕ ಆಭರಣ, ಆಯುರ್ವೇದಿಕ್​ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಪಾಸ್ಟ್​ ಫುಡ್​ ಇತ್ಯಾದಿ ಉತ್ಪನ್ನಗಳು ಲಭ್ಯವಿದೆ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​, ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ದೇವರಾಜ್​ ಹಿತ್ತಲಕೊಪ್ಪ, ಉಡುಪಿ ತಾಲೂಕು ಒಕ್ಕೂಟದ ಅಧ್ಯಕ್ಷೆ ಲತಾ ಅಶೋಕ್​, ಕುಂದಾಪುರ ತಾಲೂಕು ಒಕ್ಕೂಟದ ಅಧ್ಯಕ್ಷೆ ವಿಜಯಾ ಗಾಣಿಗ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಯೋಜನಾ ನಿರ್ದೇಶಕ ಕರೀಂ ಅಸಾದಿ ಸ್ವಾಗತಿಸಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ನವ್ಯಾ ನಿರೂಪಿಸಿ, ತಾಲೂಕು ವ್ಯವಸ್ಥಾಪಕ ಪ್ರಶಾಂತ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net