

ಚೌಳಹಿರಿಯೂರು: ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ 2011ರಲ್ಲಿ ಕೆಲವು ಜಿಲ್ಲೆಗಳನ್ನು ಆಯ್ಕೆ ಮಾಡಿಕೋಂಡು ಸಂಘಗಳನ್ನು ರಚಿಸಿ ಈ ಸಂಘಗಳ ಬಲವಧನೆಗೆ ಸಂಜೀವಿನಿ ಒಕ್ಕೂಟ ರಚಿಸಿಕೊಂಡು ಮಹಿಳೆಯರಿಗೆ ಪುನರ್ಜಿವನ ನೀಡಿದಂತಾಗಿದೆ ಎಂದು ತಾಲೂಕು ಮೇಲ್ವಿಚಾರಕ ಲೋಕೇಶ್ ತಿಳಿಸಿದರು.
ಚೌಳಹಿರಿಯೂರಿನ ಸಂಜೀವಿನಿ ಒಕ್ಕೂಟದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಬಡತನದ ತೀರ್ವತೆ ಕಡಿಮೆಮಾಡಿ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ದುಡಿಮೆ ಹೆಚ್ಚಿಸಲು ಸಂಘ ಸಹಕಾರಿಯಾಗಲಿದೆ ಎಂದರು.
ಒಕ್ಕೂಟದ ಅಧ್ಯಕ್ಷೆ ಎಮ್.ವೀಣಾ ಮಾತನಾಡಿ, ಸ್ವ-ಸಹಾಯ ಸಂಘಗಳಲ್ಲಿ ಗೃಹ ಉಪಯೋಗಿ ವಸ್ತುಗಳನ್ನು ತಯಾರಿಸಿ ಗ್ರಾಮಗಳಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಮಾರಾಟ ಮಾಡುವುದರಿಂದ ಆದಾಯ ವೃದ್ಧಿಸಿಕೊಳ್ಳಬೇಕು. ಇದರಿಂದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬಹುದು. ಸಂಘಗಳಿಗೆ ನೀಡಿದ 34.5 ಲಕ್ಷ ರೂ.ಸಾಲ ಶೇ.100 ಮರು ಪಾವತಿಯಾಗಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ವ್ಯವಸ್ಥಾಪಕ ಮಂಜೇಗೌಡ ಮಾತನಾಡಿ, ಮಹಿಳೆಯರು ಸಾಕ್ಷರಸ್ಥರಾದರೆ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಎಮ್.ಬಿ.ಕೆ ಶಾರದಮ್ಮ ಲೆಕ್ಕ ಪರಿಶೋಧನಾ ವರದಿ ಮತ್ತು ವಾರ್ಷಿಕ ವರದಿ ವಾಚಿಸಿದರು. ಗ್ರಾಪಂ ಅಧ್ಯಕ್ಷೆ ಸುಧಾ ದೇವರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ನೂತನ ಪದಾಧಿಕಾರಿಗಳಾಗಿ ಶಾರದಮ್ಮ ಪ್ರಮಾಣ ವಚನ ಬೋಧಿಸಿದರು. ಚಂದ್ರಕಲಾ, ನಾಗರತ್ನ ಮತ್ತು ಸೌಮ್ಯ, ಶೈಲಾ, ಅನುಪಮ ಇದ್ದರು.