ಬೆಟ್ಟಂಪಾಡಿಯಲ್ಲಿ ಮತ್ತೆ ಸಂಜೀವಿನಿ ಸಂತೆ ಆರಂಭ : ಪ್ರತಿ ಸೋಮವಾರ ನಡೆಸಲು ತೀರ್ಮಾನ

New Project (38)
Published on

ಪುತ್ತೂರು ಗ್ರಾಮಾಂತರ: ಬೆಟ್ಟಂಪಾಡಿ ಹಾಗೂ ನಿಡ್ಪಳ್ಳಿ ಗ್ರಾಮ ಪಂಚಾಯಿತಿ ಮತ್ತು ಶ್ರೀಕೃಪಾ ಹಾಗೂ ಶಾಂತದುರ್ಗಾ ಸಂಜೀವಿನಿ ಒಕ್ಕೂಟಗಳ ವತಿಯಿಂದ 75ನೇ ಆಜಾದ್ ಕಾ ಅಮೃತ್ ಮಹೋತ್ಸವ ಅಂಗವಾಗಿ ಸೋಮವಾರ ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ವಠಾರದಲ್ಲಿ ಸಂಜೀವಿನಿ ಸಂತೆ ಆರಂಭಿಸಲಾಯಿತು. ಪ್ರತಿ ಸೋಮವಾರ ಸಂಜೀವಿನಿ ಸಂತೆ ಮುಂದುವರಿಸಿಕೊಂಡು ಹೋಗುವುದೆಂದು ಸಂಜೀವಿನಿ ಒಕ್ಕೂಟದ ಸದಸ್ಯೆಯರು ತೀರ್ಮಾನ ಕೈಗೊಂಡಿದ್ದಾರೆ.

ಸಂಜೀವಿನಿ ಒಕ್ಕೂಟದ ವತಿಯಿಂದ ಕಳೆದ ವರ್ಷ ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ವಠಾರದಲ್ಲಿ ಸಂಜೀವಿನಿ ಸಂತೆ ಆರಂಭಿಸಲಾಗಿತ್ತು. ಆದರೆ ಮಳೆಗಾಲದಲ್ಲಿ ತರಕಾರಿ ಹಾಗೂ ಇನ್ನಿತರ ದಿನಬಳಕೆ, ಆಹಾರ ಪದಾರ್ಥಗಳ ಅಲಭ್ಯತೆಯ ಹಾಗೂ ಮಳೆಯ ಹಿನ್ನೆಲೆಯಲ್ಲಿ ಸಂಜೀವಿನಿ ಸಂತೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಸಂಜೀವಿನಿ ಸಂತೆಗೆ ಚಾಲನೆ ನೀಡಲಾಗಿದೆ.

ಪುತ್ತೂರು ತಾಲೂಕು ಸಂಜೀವಿನಿ ಯೋಜನೆಯ(ಎನ್.ಆರ್.ಎಲ್.ಎಂ) ವಲಯ ಮೇಲ್ವಿಚಾರಕಿ ನಳಿನಾಕ್ಷಿ, ಬೆಟ್ಟಂಪಾಡಿ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ. ಚೈತ್ರಾ, ನಿಡ್ಪಳ್ಳಿ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ. ಭವ್ಯಾ ಬಿ, ನಿಡ್ಪಳ್ಳಿ ಕೃಷಿ ಸಖಿ ಹೇಮಾವತಿ, ಬೆಟ್ಟಂಪಾಡಿ ಕೃಷಿ ಸಖಿ ಸೌಮ್ಯಾ, ಪಶುಸಖಿ ಉಮಾವತಿ, ಸಂಜೀವಿನಿ ಯೋಜನೆಯ ನಿಡ್ಪಳ್ಳಿ ಸ್ಥಳೀಯ ಸಂಪನ್ಮೂಲ ವ್ಯಕ್ತಿ ಶಾಲಿನಿ ಮತ್ತಿತರರ ಉಪಸ್ಥಿತಿಯಲ್ಲಿ ಸೋಮವಾರ ಸಂಜೀವಿನಿ ಸಂತೆಗೆ ಮತ್ತೆ ಚಾಲನೆ ನೀಡಲಾಯಿತು.

ಸಂಜೀವಿನಿ ಒಕ್ಕೂಟದ ಸದಸ್ಯೆಯರು ತಾವು ತಯಾರಿಸಿದ ವಿವಿಧ ಗೃಹಪಯೋಗಿ ಹಾಗೂ ದಿನಬಳಕೆಯ ವಸ್ತುಗಳು, ಆಹಾರ ಪದಾರ್ಥಗಳು ಹಾಗೂ ತಾವು ಬೆಳೆದ ಸಾವಯವ ತರಕಾರಿಗಳನ್ನು ತಂದು ಸಂತೆಯಲ್ಲಿ ಮಾರಾಟ ಮಾಡಿದರು. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿತು.

ಸಂಜೀವಿನಿ ಒಕ್ಕೂಟದ ಸದಸ್ಯೆಯರ ಆರ್ಥಿಕ ಸ್ವಾವಲಂಬನೆಗೆ ಸಂಜೀವಿನಿ ಸಂತೆ ಪೂರಕವಾಗಿದೆ. ಸದಸ್ಯೆಯರು ಯಾವುದೇ ಉತ್ಪನ್ನವನ್ನು ತಂದು ನೇರವಾಗಿ ಸಂಜೀವಿನಿ ಸಂತೆಯಲ್ಲಿ ಮಾರಾಟ ಮಾಡಬಹುದಾಗಿದೆ. ಮಧ್ಯವರ್ತಿಗಳಿಲ್ಲದೆ ನೇರವಾಗಿ ತಂದು ಮಾರಾಟ ಮಾಡುವುದರಿಂದ ಅವರಿಗೆ ಹೆಚ್ಚಿನ ಆದಾಯ ಸಿಗಲಿದೆ. ಮುಂದೆ ವಾರದ ಪ್ರತಿ ಸೋಮವಾರ ಸಂಜೀವಿನಿ ಸಂತೆ ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸಲಾಗಿದೆ. ಚೈತ್ರಾ, ಬೆಟ್ಟಂಪಾಡಿ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net