

ಮುಳಬಾಗಿಲು: ಪ್ರಕೃತಿ ಮನುಕುಲಕ್ಕೆ ಆರೋಗ್ಯವಂತ ಪರಿಸರವನ್ನೇ ನೀಡಿದೆ. ಆದರೆ, ಅದನ್ನು ಮನುಷ್ಯ ದುರ್ಬಳಕೆ ಮಾಡಿಕೊಂಡ ಪರಿಣಾಮ ಪ್ರತಿಕೂಲ ಪರಿಣಾಮ ಎದುರಿಸುವಂತಾಗಿದೆ. ಆದರೆ, ಇದಕ್ಕೆ ಭಿನ್ನ ಎಂಬಂತೆ ಪೂರ್ವಿಕರ ಕಾಲದಿಂದಲೂ ಕುಡಿಯುವ ನೀರಿಗೆ ಬಳಸುತ್ತಿದ್ದ ತೆರೆದ ಬಾವಿ ಈಗಲೂ ಸಂಜೀವಿನಿಯಾಗಿದೆ.
ನಗರದ ಅಂಜನಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಪಾಳು ಬಿದ್ದಿರುವ ಪುರಾತನ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಪಕ್ಕದಲ್ಲಿ 25 ಅಡಿ ಆಳದ ತೆರೆದ ಬಾವಿ ಬೇಸಿಗೆಯಲ್ಲೂ ಸುತ್ತಮುತ್ತಲ ನಿವಾಸಿಗಳ ನೀರಿನ ದಾಹ ನೀಗಿಸುತ್ತಿದ್ದು, ಹಗಲು&ರಾತ್ರಿ ಎನ್ನದೇ ಜನರು ನೀರು ಸಂಗ್ರಹಿಸಲು ಬಾವಿಗೆ ಬರುತ್ತಿರುವುದನ್ನು ಕಾಣಬಹುದಾಗಿದೆ.
ಗ್ಯಾಸ್ಟ್ರಿಕ್, ಹೊಟ್ಟೆ ಸಮಸ್ಯೆ, ಕೈಕಾಲು ನೋವು ಸೇರಿ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಈ ಬಾವಿ ನೀರು ಸಂಜೀವಿನಿ ಎಂಬ ನಂಬಿಕೆ ಇದೆ. ಹಳೇ ಮುಳಬಾಗಿಲು ನಿವಾಸಿಗಳಲ್ಲಿ ಈಗಲೂ ನಂಬಿಕೆ ಇದ್ದು, ಈ ನೀರಿಗೆ ಈಗಲೂ ಮುಗಿ ಬೀಳುತ್ತಾರೆ.
ಸುಮಾರು 2&3 ಕಿಮೀ ದೂರದಿಂದ ಈ ಬಾವಿ ನೀರಿಗೆ ಜನರು ನಿತ್ಯ ಬರುತ್ತಾರೆ. ಆದರೆ ಈ ಬಾವಿ ಅಭಿವೃದ್ಧಿಗೆ ತಾಲೂಕು ಆಡಳಿತ ಮತ್ತು ಜನಪ್ರತಿನಿಧಿಗಳು ಗಮನ ಹರಿಸಿಲ್ಲ. ಇಂತಹ ಶುದ್ಧ ನೀರಿನ ಜಲಮೂಲಗಳ ಸಂರಕ್ಷಣೆ ಮಾಡಿದರೆ ಶುದ್ಧ ಕುಡಿಯುವ ನೀರು ಸಿಗುವಂತೆ ಮಾಡಬಹುದು.
ಈಗ ಕೊರೆಯುವ ಕೊಳವೆ ಬಾವಿಗಳಲ್ಲಿ ಫ್ಲೋರೈಡ್, ರಾಸಾಯನಯುಕ್ತ ನೀರು ಕುಡಿಯಲು ಯೋಗ್ಯವಲ್ಲ ಎಂಬ ಕಾರಣದಿಂದ ಬಾಟಲ್ ನೀರು ಸೇರಿ ಕೊಳೆಯುವ ಬಾವಿ ನೀರನ್ನು ಆರ್ಒ (ಶುದ್ಧ ನೀರಿನ ಘಟಕಗಳ) ಯಂತ್ರಗಳಿಂದ ಫಿಲ್ಟರ್ ಮಾಡಿ ಸೇವಿಸುವ ಕಾಲಘಟ್ಟದಲ್ಲಿ ಈ ರೀತಿ ಬಾವಿಗಳು ಬಡವರ ಪಾಲಿಗೆ ಸಂಜೀವಿನಿಯಾಗಿದೆ. ಇಂತಹ ತೆರೆದ ಬಾವಿಗಳ ಸಂರಕ್ಷಣೆ ಮತ್ತು ಬೆಟ್ಟಗುಡ್ಡುಗಳ ನಡುವೆ ಹೊಸದಾಗಿ ತೆರೆದ ಬಾವಿಗಳನ್ನು ಶುದ್ಧಗೊಳಿಸಿದರೆ ಜನರ ಆರೋಗ್ಯವು ಸುಧಾರಿಸುತ್ತದೆ. ಜತೆಗೆ ಜಲಮೂಲಗಳ ರಕ್ಷಣೆ ಮಾಡಿದಂತಾಗುತ್ತದೆ.
ಪಾಳುಬಿದ್ದ ಪುರಾತನ ದೇವಾಲಯ
ಪುರಾತಣ ಪ್ರಸಿದ್ಧ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ ಹಲವು ದಶಕಗಳಿಂದ ಯಾರು ಗಮನಿಸುವರೇ ಇಲ್ಲದೆ ಪಾಳು ಬಿದಿದೆ. ಪೂರ್ವಿಕರ ಕಾಲದಲ್ಲಿ ಪರಕಿಯರು ದಾಳಿ ಮಾಡಿದಾಗ ದೇವಾಲಯ ದಾಳಿಗೆ ತುತ್ತಾಗಿ ಹಾಗೆಯೇ ಉಳಿದಿದೆ ಎನ್ನುತ್ತಾರೆ ಗ್ರಾಮದ ಹಿರಿಯರು. ಇಂತಹ ಪುರಾತನ ದೇವಾಲಯಗಳು ಜೀಣೋರ್ದ್ಧಾರ ಮಾಡಿ ದೇಗುಲಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪತ್ತೆ ಮಾಡಿ ಮುಂದಿನ ಪೀಳಿಗೆಗೆ ಇದರ ಇತಿಹಾಸ ನೀಡಬೇಕಾದ ಹೊಣೆ ಹೊರಬೇಕಿದೆ.
ಮುಳಬಾಗಿಲಿನ ಅಂಜನಾದ್ರಿ ಬೆಟ್ಟದ ತಪ್ಪಿಲಿನಲ್ಲಿರುವ ಪಾಳುಬಿದ್ದ ದೇವಾಲಯದ ಪಕ್ಕದ ತೆರೆದ ಬಾವಿ ಅಭಿವೃದ್ಧಿಗೆ ಶಾಸಕರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು.
> ವಿ.ಗೀತಾ
ತಹಸೀಲ್ದಾರ್, ಮುಳಬಾಗಿಲು
ಬಾವಿ ಮತ್ತು ದೇವಾಲಯದ ಬಗ್ಗೆ ಸ್ಥಳ ಪರಿಶೀಲಿಸಿ, ನಗರ ಸಭೆಯ ಸಾಮಾನ್ಯ ಸಭೆಯ ಮುಂದೆ ಇಡಲಾಗುವುದು. ನಗರ ಸಭೆಗೆ ಸೇರುತ್ತೋ, ಕಂದಾಯ ಇಲಾಖೆಗೆ ಸೇರುತ್ತೋ, ಎಂಬುದರ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ.
> ವಿ.ಶ್ರೀಧರ್
ಪೌರಾಯುಕ್ತ, ನಗರಸಭೆ ಮುಳಬಾಗಿಲು
ಅಂಜನಾದ್ರಿ ಬೆಟ್ಟದಲ್ಲಿ ಹಿಂದೆ ರಾಜರು, ಪಾಳೆಗಾರರು ಆಳ್ವಿಕೆ ಮಾಡುತ್ತಿದ್ದರು ಎಂಬುದನ್ನು ನಮ್ಮ ಪೂರ್ವಿಕರು ಹೇಳುತ್ತಿದ್ದರು. ಅವರ ಕಾಲದಲ್ಲೇ ದೇವಾಲಯ ದಾಳಿಗೆ ತುತ್ತಾಗಿದೆ. ಅಂದಿನಿಂದಲೂ ಇದೇ ರೀತಿ ಇದೆ. ಪಕ್ಕದಲ್ಲಿ ಇರುವ ತೆರೆದ ಬಾವಿ ನೀರು ಅವರು ಬಳಸುತ್ತಿದ್ದರು ಎಂಬ ಮಾಹಿತಿ ಇದೆ. ನಂತರ ಸ್ಥಳಿಯರು ಈ ನೀರನ್ನು ಸಂಜೀವಿನಿ ಎಂದು ತಿಳಿದು ಸೇವನೆ ಮಾಡುತ್ತಾರೆ. ಗ್ಯಾಸ್ಟ್ರಿಕ್, ಹೊಟ್ಟೆ ಸಮಸ್ಯೆ, ಕೈಕಾಲು ನೋವು ಮತ್ತೆ ಆರೋಗ್ಯ ಸಮಸ್ಯೆಗಳಿಗೆ ಈ ನೀರು ಉತ್ತಮವಾಗಿದೆ.
> ಯಜಮಾನ್ ಕೆ.ವೆಂಕಟಪ್ಪ
ಸ್ಥಳಿಯ ಪಲ್ಲಿಗಪಾಳ್ಯ ನಿವಾಸಿ, ಮುಳಬಾಗಿಲು