

ಹುಬ್ಬಳ್ಳಿ: ಶಿಕ್ಷಣವನ್ನು ಕೇವಲ ಕಾಲೇಜಿನಲ್ಲಿ ಪಡೆದರಷ್ಟೇ ಸಾಲದು, ಜೀವನದಲ್ಲಿ ಕಲಿಯುವುದೆಲ್ಲವೂ ಶಿಕ್ಷಣವೇ ಆಗಿದೆ, ಹಾಗಾಗಿ ವೈದ್ಯಕಿಯ ವೃತ್ತಿಯಲ್ಲಿ ನಿರಂತರ ಕಲಿಕೆ ಅಗತ್ಯ ಎಂದು ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ಡಾ. ಕೆ.ಪಿ. ಪುತ್ತುರಾಯ ಅಭಿಪ್ರಾಯಪಟ್ಟರು.
ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಗುರುವಾರ ಏರ್ಪಡಿಸಿದ್ದ ಸಂಜೀವಿನಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವೈದ್ಯರ ಯಶಸ್ಸು ಇರುವುದು ಅವರ ವೃತ್ತಿಯನ್ನು ಗೌರವಿಸುವುದು, ಪ್ರೀತಿಸುವುದು, ನಗುಮುಖದಿಂದ ಸೇವೆ ಮಾಡುವುದು ಮತ್ತು ತೃಪ್ತಿ ಭಾವ ಹೊಂದುವುದರಲ್ಲಿ ಅಡಗಿದೆ. ರೋಗಿಯ ಯೋಗೇಕ್ಷೇಮ ವೈದ್ಯನ ನಡವಳಿಕೆ, ಬದ್ಧತೆ ಮತ್ತು ಸಂವಹನ ಮುಂತಾದ ಆದರ್ಶ ಗುಣಗಳ ಮೇಲೆ ಅವಲಂಬಿತವಾಗಿದೆ ಎಂದರು.
ಸಂಜೀವಿನಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ. ಶ್ರೀನಿವಾಸ ಬನ್ನಿಗೋಳ ಅವರು ಚರಕ ಆಚಾರ್ಯರು ಹೇಳಿದ ಪ್ರಮಾಣವಚನವನ್ನು ವೈದ್ಯ ಪದವೀಧರರಿಗೆ ಬೋಧಿಸಿದರು. ರೋಗಿಗಳೇ ನಿಮ್ಮ ಶಿಕ್ಷಕರು, ನಿಮ್ಮ ಬುದ್ಧಿವಂತಿಕೆಗಿಂತ ಹೃದಯವಂತಿಕೆ ಬಹಳ ಮುಖ್ಯ ಮತ್ತು ವೈದ್ಯಕಿಯ ಕ್ಷೇತ್ರದಲ್ಲಿ ತಪ್ಪು ಮಾಡಲು ಅವಕಾಶವೇ ಇಲ್ಲ. ಪ್ರಧಾನಮಂತ್ರಿ ಮೋದಿಯವರು ಆಯುರ್ವೇದ ವೈದ್ಯಕಿಯ ಕ್ಷೇತ್ರಕ್ಕೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಅರಿತು ಅದರ ಪ್ರಯೋಜನವನ್ನು ಪಡೆಯಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದಿನಗೂಲಿ ನೌಕರರ ಸಂದ ಅಧ್ಯ ಡಾ. ಕೆ.ಎಸ್. ಶರ್ಮಾ, ವೈದ್ಯಕಿಯ ವೃತ್ತಿ ಅತ್ಯಂತ ಶ್ರೇಷ್ಠವಾದ ವೃತ್ತಿಯಾಗಿದ್ದು, ರೋಗಿಗಳ ಸೇವೆಯನ್ನು ಮಾನವೀಯ ದೃಷ್ಟಿಯಿಂದ ನೀಡಬೇಕು ಎಂದು ಮಾರ್ಗದರ್ಶನ ನೀಡಿದರು.
ಪ್ರಾಂಶುಪಾಲ ಡಾ. ಚರಂತಯ್ಯ ಹಿರೇಮಠ ಸ್ವಾಗತಿಸಿದರು. ಪದವಿ ಪಡೆದ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯದರ್ಶಿ ಡಾ. ಸೋಮಶೇಖರ ಹುದ್ದಾರ ಮಾತನಾಡಿದರು.
ಸಂಜೀವಿನಿ ಆಸ್ಪತ್ರೆಯ ವೈದ್ಯ ಅಧೀಕ್ಷಕ ಡಾ. ಮನೋಜ ಅಲಗೂರ, ಉಪ ಪ್ರಾಂಶುಪಾಲ ಡಾ. ಮಹೇಶ ದೇಸಾಯಿ, ಮುಂತಾದವರು ಉಪಸ್ಥಿತರಿದ್ದರು.
ಡಾ. ಸಂಧ್ಯಾ, ಡಾ. ಗಜಾನನ ಭಟ್, ಡಾ. ಅಶ್ವಿನಿ ಪಾಟೀಲ ಮತ್ತು ಡಾ. ಸೌಭಾಗ್ಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಡಾ. ಅಶೋಕ ಬಿಂಗಿ ವಂದಿಸಿದರು.