ಸರಳ ಮ್ಯಾರೇಜ್​ನಲ್ಲಿ ನವದಂಪತಿಗೆ ಸ್ಯಾನಿಟೈಸರ್, ಮಾಸ್ಕ್​​ ಗಿಫ್ಟ್

sanitizer
Published on

ಚಿಕ್ಕಮಗಳೂರು: ಮನೆಯ ಮುಂದೆ ಚಪ್ಪರದಡಿ ಮದುವೆ ಮಾಡಿಕೊಂಡ ಸಂತಸದಲ್ಲಿ ವಧುವಿನ ಆನಂದಭಾಷ್ಪ. ನವದಂಪತಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಿಫ್ಟ್ . ಗುರುವಾರ ಚಿಕ್ಕಮಗಳೂರಲ್ಲಿ ನಡೆದ ಮದುವೆಯ ವಿಶೇಷ ಇದು.

ಮೈಸೂರಿನ ಮಂಜುನಾಥ್ ಮತ್ತು ಚಿಕ್ಕಮಗಳೂರಿನ ಅನುಷಾ ಗುರುವಾರ ಹಿರೇಮಗಳೂರು ಶ್ರೀ ಕೋದಂಡ ರಾಮಚಂದ್ರ ಸ್ವಾಮಿಯ ಸನ್ನಿಧಿಯಲ್ಲಿ ಕನ್ನಡದ ಪೂಜಾರಿ ಕಣ್ಣನ್ ಅವರ ಕನ್ನಡ ಮಂತ್ರ ಮಾಂಗಲ್ಯದೊಂದಿಗೆ ಸಪ್ತಪದಿ ತುಳಿಯಬೇಕಿತ್ತು. ಲಾಕ್​ಡೌನ್ ಕಾರಣ ಗುರುವಾರ ವಧುವಿನ ಮನೆಯ ಮುಂದೆ ತಳಿರು ತೋರಣ, ಹೂವಿನಿಂದ ಸಿಂಗರಿಸಿದ ಚಪ್ಪರದಡಿ ಡಾ. ರಾಜಕುಮಾರ್ ಅಭಿನಯದ ಶ್ರಾವಣ ಬಂತು ಚಿತ್ರದ ‘ಹೊಸಬಾಳಿನ ಹೊಸಿಲಲಿ ನಿಂತಿರುವ ನವಜೋಡಿಗೆ ಶುಭವಾಗಲಿ’ ಎನ್ನುವ ಗೀತೆಯ ಹಿನ್ನೆಲೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮೂರು ತಿಂಗಳ ಹಿಂದೆ ನಿಶ್ಚಿತಾರ್ಥ ನೆರವೇರಿದ್ದು, ಹಿರೇಮಗಳೂರಿನಲ್ಲಿ ಮದುವೆ ನಿಗದಿಯಾಗಿತ್ತು. ಕರೊನಾ ಲಾಕ್​ಡೌನ್ ಏ.14ಕ್ಕೆ ಪೂರ್ಣಗೊಳ್ಳುತ್ತದೆ. ಬಂಧು ಬಾಂಧವರು, ಸ್ನೇಹಿತರನ್ನು ಕರೆದು ಮದುವೆ ಮಾಡಬಹುದು ಎಂಬ ವಿಶ್ವಾಸ ಹೊಂದಿದ್ದರು. ಆದರೆ ಲಾಕ್​ಡೌನ್ ಮುಂದುವರಿದಾಗ ಹಿರಿಯರಿಗೆ ಕೊಂಚ ನಿರಾಸೆ ಮೂಡಿಸಿತ್ತಾದರೂ ಮನೆಯ ಮುಂದೆ ಕನ್ಯಾದಾನ ಮಾಡಿಕೊಟ್ಟ ನೆಮ್ಮದಿಯೂ ಪಾಲಕರಲ್ಲಿ ಕಂಡು ಬಂತು. ವರ ಮೈಸೂರಿನ ಮಂಜುನಾಥ್ 25 ದಿನಗಳಿಂದ ನಗರದಲ್ಲೆ ವಾಸ್ತವ್ಯ ಹೂಡಿದ್ದರು. ವಧುವಿನ ಸಂಬಂಧಿಕರಾದ ಮಹೇಶ್ ಮತ್ತು ಮಂಜುಳಾ ದಂಪತಿ ವರನ ಪಾಲಕರ ಸ್ಥಾನದಲ್ಲಿ ಮದುವೆಯಲ್ಲಿ ಭಾಗಿಯಾದರು. ಲಕ್ಷ್ಮೀಶನಗರದ ವಧುವಿನ ಸ್ವಗೃಹದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಕುಟುಂಬದವರು ಧಾರೆ ಎರೆದರು. ಮನೆಯಲ್ಲೆ ತಯಾರಿಸಿದ ಸಿಹಿಯೂಟ ಸವಿದು ಸರಳ ಮದುವೆಗೆ ನಾಂದಿ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net