

ಮಡಿಕೇರಿ: ಮಡಿಕೇರಿ ನಗರಸಭೆಯ ಸ್ವಚ್ಛತಾ ಸಿಬ್ಬಂದಿ ಬುಧವಾರ ಹಲವು ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಮಡಿಕೇರಿ ನಗರಸಭೆಯು ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ನಗರದ ಗಾಂಧಿ ಮೈದಾನದಲ್ಲಿ ಏರ್ಪಡಿಸಿದ್ದ ಆಟೋಟ ಸ್ಪರ್ಧೆಗಳಲ್ಲಿ ೬೫ಕ್ಕೂ ಅಧಿಕ ಸ್ವಚ್ಛತಾ ಸಿಬ್ಬಂದಿ ಭಾಗಿಯಾಗಿದ್ದರು.
ಥ್ರೋಬಾಲ್, ಶಾಟ್‌ಪುಟ್, ಅಥ್ಲೆಟಿಕ್ಸ್, ಹಗ್ಗಜಗ್ಗಾಟ, ಗೋಣಿಚೀಲ ಓಟ, ಮ್ಯೂಸಿಕಲ್ ಚೇರ್ ಸೇರಿದಂತೆ ಇನ್ನೂ ಹಲವು ಆಟೋಟಗಳನ್ನು ಮಹಿಳೆಯರು ಮತ್ತು ಪುರುಷರಾಗಿ ಪ್ರತ್ಯೇಕವಾಗಿ ನಡೆಸಲಾಯಿತು. ಇವುಗಳಲ್ಲಿ ವಿಜೇತರಾದವರಿಗೆ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯಲಿದೆ.
ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್, ಪೌರಾಯುಕ್ತ ವಿಜಯ್, ಪರಿಸರ ಎಂಜಿನಿಯರ್ ಸೌಮ್ಯಾ, ನಗರಸಭೆ ಸದಸ್ಯರು, ಆರೋಗ್ಯ ನಿರೀಕ್ಷಕರು ಸೇರಿದಂತೆ ಹಲವು ಕ್ರೀಡಾಸಕ್ತರು ಆಟೋಟಗಳಿಗೆ ಸಾಕ್ಷಿಯಾದರು.