ಡೆಂಗಿ ನಿಯಂತ್ರಣಕ್ಕೆ ಬಿಎಂಟಿಸಿಯಲ್ಲಿ ಸ್ವಚ್ಚತಾ ಕಾರ್ಯ

bmtc cleaning
Published on

ಬೆಂಗಳೂರು: ರಾಜಧಾನಿಯಲ್ಲಿ ಡೆಂಘೆ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನೀಡಿರುವ ಡೆಂಘೆ ನಿಯಂತ್ರಣದ ಮಾರ್ಗದರ್ಶನ ಆಧರಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಎಲ್ಲ ಘಟಕಗಳು, ಟಿಟಿಎಂಸಿ, ಮತ್ತು ಪ್ರಮುಖ ಬಸ್ ನಿಲ್ದಾಣಗಳಲ್ಲಿ ನೀರು ನಿಲ್ಲದಂತೆ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದೆ.

ಘಟಕಗಳಲ್ಲಿ ಬಳಸಿದ ಟೈರ್‌ಗಳಲ್ಲಿ ನೀರು ಶೇಖರಿಸಿದಂತೆ ಎಚ್ಚರಿಕೆ ನೀಡಲಾಗಿದೆ. ನೀರು ಶೇಖರಿಸುವ ಸಿಮೆಂಟ್ ತೊಟ್ಟಿ, ಡ್ರಮ್, ಬ್ಯಾರೆಲ್‌ಗಳ ಮೇಲೆ ಮುಚ್ಚಳ ಮುಚ್ಚಲು ಕ್ರಮ ಕೈಗೊಳ್ಳಬೇಕು. ಘಟಕಗಳಲ್ಲಿ ಶೇಖರಣೆಯಾಗುವ ಘನತ್ಯಾಜದಲ್ಲಿ ನೀರು ನಿಲ್ಲದಂತೆ ಕ್ರಮ/ವಿಲೇವಾರಿ ಮಾಡಬೇಕು. ಹೂವಿನ ಹೂದಾನಿಗಳಲ್ಲಿ ನೀರು ಶೇಖರಿಸಿದಂತೆ ಎಚ್ಚರಿಕೆ ಜತೆಗೆ ಕಟ್ಟಡದ ಮೆಟ್ಟಿಲು/ಮೇಲ್ಚಾವಣಿಯ ಮೇಲೆ ನೀರು ನಿಲ್ಲದಂತೆ ನಿಗಾ ವಹಿಸಬೇಕು ಎಂದು ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಘಟಕ ವ್ಯವಸ್ಥಾಪಕರು, ನಿಲ್ದಾಣಾಧಿಕಾರಿಗಳಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್. ಆರ್ ಅವರು ಸೂಚಿಸಿದ್ದಾರೆ.

ಇದರನ್ವಯ ಸೋಮವಾರ ವಿವಿಧ ಬಸ್ ಘಟಕಗಳಲ್ಲಿ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಡೆಂಘೆ ರೋಗ ಹರಡದಂತೆ ಆವರಣದಲ್ಲಿ ಔಷಧ ಸಿಂಪಡಣೆ ಹಾಗೂ ಸ್ವಚ್ಚತೆಗೆ ಹೆಚ್ಚಿನ ಕೆಲಸಗಾರರನ್ನು ನಿಯೋಜಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

66 ಕಡೆಗಳಲ್ಲಿ ಸ್ವಚ್ಚತಾ ಕಾರ್ಯ:

ಬಿಎಂಟಿಸಿಯು ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ಒದಗಿಸುತ್ತಿರುವ ಸಾರಿಗೆ ಸೌಲಭ್ಯಕ್ಕೆ ಅನುಗುಣವಾಗಿ ಸ್ಥಾಪಿಸಿರುವ 49 ಘಟಕಗಳು, 10 ಟಿಟಿಎಂಸಿ, ಮೂರು ಪ್ರಮುಖ ಬಸ್ ನಿಲ್ದಾಣಗಳು (ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್. ಮಾರುಕಟ್ಟೆ, ಶಿವಾಜಿನಗರ ಬಸ್ ನಿಲ್ದಾಣ) ಮತ್ತು ನಾಲ್ಕು ಕಾರ್ಯಾಗಾರಗಳಲ್ಲಿ ಸ್ವಚ್ಚತಾ ಕಾರ್ಯವನ್ನು ಕೈಗೊಂಡು ಡೆಂಘೆ ನಿಯಂತ್ರಿಸಲು ಆದ್ಯತೆ ನೀಡಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net