

ಎ.ಅಪ್ಪಾಜಿಗೌಡ ಮುಳಬಾಗಿಲು
ಮಹಾತ್ಮ ಗಾಂಧಿ, ನರೇಂದ್ರ ಮೋದಿ ಅವರ ಸ್ವಚ್ಛ ಭಾರತದ ಕಲ್ಪನೆ ಅಣಿಕಿಸುವಂತೆ ತಾಲೂಕು ಕಚೇರಿ ಸಮೀಪದಲ್ಲೇ ಅನೈರ್ಮಲ್ಯ ತಾಂಡವವಾಡುತ್ತಿದ್ದು, ಸೂಕ್ತ ಶೌಚಗೃಹವಿಲ್ಲದೆ ನಾಗರಿಕರು ದೇಹಬಾಧೆ ತೀರಿಸಿಕೊಳ್ಳಲು ಬಯಲನ್ನೇ ಆಶ್ರಯಿಸುವಂತಾಗಿದೆ.
ತಾಲೂಕು ಕಚೇರಿ, ಉಪನೋಂದಣಾಧಿಕಾರಿ, ಉಪ ಖಜಾನೆ, ತೋಟಗಾರಿಕೆ ಇಲಾಖೆ, ಪಿಎಲ್ಡಿ ಬ್ಯಾಂಕ್, ತಾಪಂ ಕಾರ್ಯಾಲಯ, ಕೃಷಿ ಇಲಾಖೆ, ಶಾಸಕರ ಕಚೇರಿ, ಅಂಚೆ ಕಚೇರಿ, ಜಿಪಂ ತಾಂತ್ರಿಕ ಉಪವಿಭಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೇರಿ ಹಲವು ಸರ್ಕಾರಿ ಕಚೇರಿಗಳ ಸಂಕೀರ್ಣವೇ ಇರುವ ತಾಲೂಕು ಕಚೇರಿ ಮುಂದಿನ ಮುಖ್ಯರಸ್ತೆ ಬದಿಯಲ್ಲೇ ಕೆಲವರು ಮಲ, ಮೂತ್ರವಿಸರ್ಜನೆ ಮಾಡುತ್ತಿದ್ದು, ಕಚೇರಿ ಕೆಲಸಕ್ಕೆ ಬರುವವರು ಮೂಗುಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಳಬಾಗಿಲು ನಗರದಲ್ಲಿ 31 ವಾರ್ಡ್ಗಳಲ್ಲಿ ಸುಮಾರು 70 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, 365 ಗ್ರಾಮಗಳ ಜನರು ಒಂದಲ್ಲ ಒಂದು ಕೆಲಸಕ್ಕೆ ಮುಳಬಾಗಿಲಿಗೆ ಬಂದು ಹೋಗುತ್ತಾರೆ. ಆದರೆ ತಾಲೂಕು ಕಚೇರಿ ಬಳಿ ನಗರಸಭೆಗೆಯ ಎರಡು ಶೌಚಗೃಹಗಳಿದ್ದರೂ ಬಾಗಿಲು ಮುಚ್ಚಿ ಎರಡು ವರ್ಷಗಳಾಗಿವೆ. ಇದರಿಂದಾಗಿ ನಾಗರಿಕರು ರಸ್ತೆಬದಿಯಲ್ಲೇ ಮೂತ್ರರ್ವಿಜನೆ ಮಾಡುತ್ತಿದ್ದಾರೆ. ಸ್ಥಳಿಯ ಸಂಸ್ಥೆಗಳು ನಾಗರಿಕರಿಗೆ ಕನಿಷ್ಠ ಮೂಲ ಸೌಕರ್ಯ ಒದಗಿಸದ ಕಾರಣ ಸಾರ್ವಜನಿಕರು, ಅದರಲ್ಲೂ ಮಹಿಳೆಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ರೋಗರುಜಿನಗಳ ಭೀತಿ
ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ಮೂರು ಶೌಚಗೃಹಗಳಿದ್ದು, ಈ ಪೈಕಿ ಟಿಎಪಿಸಿಎಂಎಸ್ ವೃತ್ತದ ಸಮೀಪದ ಶೌಚಗೃಹ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಆಸ್ಪತ್ರೆ ಮುಂಭಾಗದ, ತಾಲೂಕು ಕಚೇರಿ ಮುಂಭಾಗದ ಶೌಚಗೃಹ ಮುಚ್ಚಿ ವರ್ಷಗಳೇ ಕಳೆದಿವೆ. ಆದರೂ ಅವುಗಳ ಪುನರಾರಂಭಕ್ಕೆ ನಗರಸಭೆ ಕ್ರಮವಹಿಸದ ಪರಿಣಾಮ ವೃದ್ಧರು, ಸಕ್ಕರೆ ಕಾಯಿಲೆ ರೋಗಿಗಳು ಸೇರಿ ಸಾರ್ವಜನಿಕರು ಬಯಲನ್ನೇ ಆಶ್ರಯಿಸುತ್ತಿದ್ದಾರೆ. ಇದರಿಂದ ನೈರ್ಮಲ್ಯ ಮರೀಚಿಕೆಯಾಗಿದೆ.
" ನಗರಸಭೆಯಿಂದ ಎರಡು ಬಾರಿ ಸಾರ್ವಜನಿಕ ಶೌಚಗೃಹ ನಡೆಸಲು ಟೆಂಡರ್ ಕರೆದಿದ್ದು, ಯಾರೂ ಪಾಲ್ಗೊಂಡಿಲ್ಲ.
ಇನ್ನೊಂದು ವಾರದಲ್ಲಿ ಮತ್ತೇ ನಗರಸಭೆಯಿಂದಲೇ ಮಾರ್ಚ್ವರೆಗೂ ಶೌಚಗೃಹಗಳನ್ನು ನಿರ್ವಹಿಸಲಾಗುವುದು. ಮತ್ತೆ ಟೆಂಡರ್ ಕರೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು."
- ವಿ.ಶ್ರೀಧರ್,
ಪೌರಾಯುಕ್ತ, ನಗರಸಭೆ, ಮುಳಬಾಗಿಲು.
"ನಗರಸಭೆಯು ಸ್ವಚ್ಛ ಭಾರತದ ಸ್ಥಳಿಯ ರೂವಾರಿ. ಅದರ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುತ್ತಿದ್ದಾಗ ಜನರು ಎಲ್ಲೆಂದರಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುತ್ತಾರೆ. ಇದನ್ನು ತಡೆಗಟ್ಟಲು ಜನಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕ ಶೌಚಗೃಹಗಳನ್ನು ತೆರೆಯಬೇಕು ಹಾಗೂ ಅವುಗಳನ್ನು ಸರಿಯಾಗಿ ನಿರ್ವಹಿಸಬೇಕು." - ವಿ.ಜಯಪ್ಪ,
ಜಿಲ್ಲಾ ಖಜಾಂಚಿ ಭಾರತೀಯ ಕಿಸಾನ್ ಸಂಘ