ಆಡಳಿತಾತ್ಮಕ ನೆರವು ನೀಡಲು ಸಿದ್ಧ : ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಮ್ ಆಶ್ವಾಸನೆ

ಎಂಡೋ ಸಂತ್ರಸ್ತರ ಪಾಲಕರ ಸಭೆಯನ್ನು ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಮ್ ಉದ್ಘಾಟಿಸಿದರು.
Published on

ಬೆಳ್ತಂಗಡಿ: ಎಂಡೋ ಸಂತ್ರಸ್ತರ ಬವಣೆ ಇಂದು ನಿನ್ನೆಯದಲ್ಲ. ಸರ್ಕಾರದ ಮಟ್ಟದಲ್ಲಿ ಅಗತ್ಯ ಸೌಲಭ್ಯ ಪೂರೈಸುತ್ತಿದ್ದು, ಸಾನ್ನಿಧ್ಯದಂತ ಕೇಂದ್ರಗಳು ಎಂಡೋ ಸಂತ್ರಸ್ತರಿಗಾಗಿ ತ್ಯಾಗ ಮಾಡುತ್ತಿವೆ. ಆಡಳಿತಾತ್ಮಕವಾಗಿ ಅಗತ್ಯ ಸಹಕಾರ ಒದಗಿಸಲು ಸದಾ ಸಿದ್ಧ ಎಂದು ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಮ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೀ ಗಣೇಶ ಸೇವಾ ಟ್ರಸ್ಟ್ ಮಂಗಳೂರು ಸಹಯೋಗದೊಂದಿಗೆ ಉಜಿರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾನ್ನಿಧ್ಯ ಕೌಶಲ ತರಬೇತಿ ಕೇಂದ್ರದಲ್ಲಿ, ಭಿನ್ನ ಸಾಮರ್ಥ್ಯದ ಮಕ್ಕಳ ಪಾಲಕರ ಹಾಗೂ ಶಿಕ್ಷಕರ ಸಭೆ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಎಂಡೋ ಸೆಲ್ ಸಂಯೋಜಕ ಸಜೀವುದ್ದೀನ್ ಎಂಡೋ ಸಂತ್ರಸ್ತರಿಗೆ ಸಿಗುವ ಸೌಲಭ್ಯ ಬಗ್ಗೆ ಮಾಹಿತಿ ನೀಡಿದರು.

ಸಾನ್ನಿಧ್ಯ ಕೌಶಲ ತರಬೇತಿ ಕೇಂದ್ರದ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ ಮಾತನಾಡಿ, ಎಂಡೋಸಲ್ಫಾನ್ ಕೇಂದ್ರ ನಡೆಸುವಲ್ಲಿ ಅನೇಕ ಸವಾಲು ಹಾಗೂ ಅಡೆತಡೆಗಳಿವೆ. ಅನೇಕ ನ್ಯೂನ್ಯತೆಗಳು ಎದುರಾದರೂ ಅದನ್ನು ನಿಭಾಯಿಸುತ್ತಾ ಮಕ್ಕಳ ಯೋಗಕ್ಷೇಮ ಶಿಕ್ಷಕರು ನೋಡಿಕೊಳ್ಳುತ್ತಿದ್ದಾರೆ ಎಂದರು.

ಪಾಲಕರು ಎಂಡೋಸಲ್ಫಾನ್ ಪೀಡಿತರ ಐಡಿ ಕಾರ್ಡ್ ಸರ್ಕಾರ ನೀಡದೆ ಅನೇಕ ವರ್ಷಗಳಾಗಿವೆ. ಈ ಕುರಿತು ಗಮನ ಹರಿಸುವಂತೆ ಹಾಗೂ ಸರ್ಕಾರ ಇನ್ನೂ ಹೆಚ್ಚಿನ ಸವಲತ್ತು ಒದಗಿಸುವಂತೆ ತಿಳಿಸಿದರು.

ಗ್ರಾ.ಪಂ ಅಧ್ಯಕ್ಷೆ ಉಷಾ ಕಿರಣ್, ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ, ಶ್ರೀ ಗಣೇಶ್ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ, ಕಾರ್ಯದರ್ಶಿ ರಾಮಕೃಷ್ಣ, ಕೇಂದ್ರದ ಸಲಹೆಗಾರ ರೋಷನ್ ಸಿಕ್ವೇರಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ರತ್ನಾವತಿ, ಸಂಪನ್ಮೂಲ ವ್ಯಕ್ತಿ ಸೀತಾ ಆರ್.ಶೇಟ್ ಮತ್ತಿತರರು ಉಪಸ್ಥಿತರಿದ್ದರು. ಉಜಿರೆ ಕೇಂದ್ರದ ಮೇಲ್ವಿಚಾರಕಿ ಮಲ್ಲಿಕಾ ಸ್ವಾಗತಿಸಿದರು. ವಿಶೇಷ ಶಿಕ್ಷಕಿ ಅಕ್ಷತಾ ರೂಪಿಸಿದರು. ಗೀತಾ ವಂದಿಸಿದರು.

ಪೀಠೋಪಕರಣ ಹಸ್ತಾಂತರ

ಶ್ರೀಗಣೇಶ್ ಸೇವಾ ಟ್ರಸ್ಟ್ ವತಿಯಿಂದ ಕೇಂದ್ರಕ್ಕೆ ಪೀಠೋಪಕರಣ ಒದಗಿಸಲಾಯಿತು. ಉಜಿರೆ ಗ್ರಾ.ಪಂ. ವತಿಯಿಂದ ಕೇಂದ್ರದಲ್ಲಿ ಗಾರ್ಡನ್ ವ್ಯವಸ್ಥೆ ನಿರ್ಮಿಸಲಾಗುತ್ತಿದ್ದು, ಇದಕ್ಕೆ ಪೂರಕ ಸವಲತ್ತುಗಳನ್ನು ಒದಗಿಸುವ ಮೂಲಕ ಶೀಘ್ರವೇ ಹಸ್ತಾಂತರಿಸುವ ಭರವಸೆಯನ್ನು ಗ್ರಾ.ಪಂ ಅಧಿಕಾರಿಗಳು ನೀಡಿದರು. ಕೇಂದ್ರದಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರುಬಿನಾ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net