

ಬೆಂಗಳೂರು: ನಮ್ಮ ನೆಲದಲ್ಲಿ ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಎಂಇಎಸ್, ಶಿವಸೇನೆ ಅಥವಾ ಮತ್ತ್ಯಾರೇ ಆಗಲಿ ನಮ್ಮ ನಾಡಿನ ಹೆಮ್ಮೆಯ ವೀರಪುತ್ರ ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿದರೆ ಕನ್ನಡಿಗರ ಸಹನೆ ಪರೀಕ್ಷಿಸಿದಂತೆ. ಇಂತಹ ಉದ್ಧಟತನಗಳನ್ನು ಕನ್ನಡಿಗರು ಸಹಿಸುವುದಿಲ್ಲ. ನಾಡಿನ ವೀರಪುತ್ರ ಮತ್ತು ವನಿತೆಯರ ವಿರುದ್ಧ ನಮ್ಮ ನೆಲದಲ್ಲಿ ತಗಾದೆ ತೆಗೆದರೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಡಿಕೆ ಎಚ್ಚರಿಸಿದ್ದಾರೆ.
ನಮ್ಮ ನಾಡಿನ ನೆಲ-ಜಲ, ಭಾಷೆ ಮತ್ತು ಗಡಿ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಈ ನೆಲದ ಅಸ್ಮಿತೆಗೆ ಭಂಗ ತರುವವರನ್ನು ಹೆಡೆಮುರಿ ಕಟ್ಟುವುದು ಸ್ವಾಭಿಮಾನಿ ಕನ್ನಡಿಗರ ರಕ್ತದಲ್ಲೇ ಇದೆ ಎಂದಿರುವ ಕುಮಾರಸ್ವಾಮಿ, ಕನ್ನಡಿಗರೆಂದರೆ- ''ಸಾಧುಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ, ಬಾಧಿಪ್ಪ ಕಲಿಗೆ ಕಲಿಯುಗವಿಪರೀತನ್...'' ಎನ್ನುತ್ತ ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದ ಬರಹವನ್ನು ಉಲ್ಲೇಖಿಸಿದ್ದಾರೆ.