

ಹೊನ್ನಾಳಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಘಟಕದ ತಾಲೂಕು ಅಧ್ಯಕ್ಷ ನಾಗರಾಜ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ಹಾಗೂ ಮಾನವ ಸರಪಳಿ ರಚಿಸಿ ತಹಸೀಲ್ದಾರ್ ಪಟ್ಟರಾಜಗೌಡ ಅವರಿಗೆ ಮನವಿ ಅರ್ಪಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಅರಕೆರೆ ನಾಗರಾಜ್ ಮಾತನಾಡಿ, ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ನೀಡುತ್ತೇವೆ. ಅದಕ್ಕಾಗಿ ಸಂವಿಧಾನ ಬದಲಿಸುತ್ತೇವೆ ಎಂಬ ಉಪ ಮುಖ್ಯಮಂತ್ರಿಯವರ ಹೇಳಿಕೆಯನ್ನು ತಾಲೂಕು ಬಿಜೆಪಿ ಘಟಕ ಬಲವಾಗಿ ವಿರೋಧಿಸುತ್ತದೆ ಎಂದರು.
ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಕೂಡಲೇ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಹಿಂದೆ ಬಿಜೆಪಿಯ ಸಂಸದರಾಗಿದ್ದ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡದಿದ್ದರೂ ಕಾಂಗ್ರೆಸ್ ಸುಳ್ಳು ಆರೋಪ ಮಾಡಿತ್ತು. ಆದರೆ ಡಿ.ಕೆ. ಶಿವಕುಮಾರ್ ಸಂದರ್ಶನವೊಂದರಲ್ಲಿ ಹೇಳಿರುವುದು ರುಜುವಾತು ಆಗಿದೆ. ಆದ್ದರಿಂದ ಕಾಂಗ್ರೆಸ್ ನಾಯಕ ಹಾಗೂ ದಲಿತ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನಿಸಿದರು.
ನಿಕಟಪೂರ್ವ ಅಧ್ಯಕ್ಷ ಜೆ.ಕೆ. ಸುರೇಶ್ ಮಾತನಾಡಿ, ಕಾಂಗ್ರೆಸ್ನ ಮುಖಂಡರು ಪ್ರತಿ ಬಾರಿಯೂ ಬಿಜೆಪಿ ಸಂವಿಧಾನ ವಿರೋಧಿ ಎಂದು ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದರು. ಆದರೆ ಸ್ವತಃ ರಾಜ್ಯ ಕಾಂಗ್ರೆಸ್ ಅಧ್ಯಕ್ಷರೇ ಸಂವಿಧಾನ ಬದಲಾಯಿಸುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಮುಖಂಡ ನೆಲಹೊನ್ನೆ ಮಂಜುನಾಥ್, ಎಸ್ಸಿ ಮೋರ್ಚಾ ಅಧ್ಯಕ್ಷ ಬೇಲಿಮಲ್ಲೂರು ಉಮೇಶ್, ಎಂಎಸ್ ಪಾಲಾಕ್ಷಪ್ಪ ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ವಿ.ಶ್ರೀಧರ್, ರಂಗನಾಥ್, ಬಾಬು ಹೋಬಳದಾರ್, ಮುಖಂಡರಾದ ಮಂಜುನಾಥ್ ಇಂಚರ, ಮಹೇಶ್ ಹುಡೇದ್, ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್್ಕ ಮಾರುತಿನಾಯ್್ಕ ರಂಗನಾಥ್ ಕುಳಗಟ್ಟೆ, ರಾಜು ಪಲ್ಲವಿ, ಬೀರಪ್ಪ ಸೇರಿ ಅನೇಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿದ್ದರು.