

ಬೆಳಗಾವಿ: ಚನ್ನಮ್ಮನ ಕಿತ್ತೂರಿನಿಂದ (ಎನ್‌ಎಚ್–4) ಇಂಚಲ ಕ್ರಾಸ್ (ಬೆಳಗಾವಿ–ರಾಯಚೂರ ರಸ್ತೆ) ವರೆಗೂ ರಾಜ್ಯ ಹೆದ್ದಾರಿ ನಿರ್ಮಿಸಬೇಕು ಹಾಗೂ ಮಲಪ್ರಭಾ ನದಿಗೆ ಸಂಗೊಳ್ಳಿ ಹತ್ತಿರ ನಿರ್ಮಿಸುತ್ತಿರುವ ರಾಯಣ್ಣ ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಬೆಳಗಾವಿಯ ನಿಯೋಗವು ಸಚಿವ ಎಚ್.ಕೆ. ಪಾಟೀಲ ಅವರಿಗೆ ಮನವಿ ಸಲ್ಲಿಸಿತು.
ಬೇವಿನಕೊಪ್ಪದ ವಿಜಯಾ ನಂದ ಸ್ವಾಮೀಜಿ ನೇತೃತ್ವದಲ್ಲಿ ಗದಗನಲ್ಲಿ ಸಚಿವರನ್ನು ಭೇಟಿ ಯಾದ ನಿಯೋಗವು, ಸಂಗೊಳ್ಳಿ ಹತ್ತಿರ ನಿರ್ಮಿಸುತ್ತಿರುವ ರಾಯಣ್ಣ ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಅದನ್ನು ಬೇಗ ಮುಗಿಸ ಬೇಕು. ಆನಂದಾಶ್ರಮಕ್ಕೆ ಸಾಂಸ್ಕೃತಿಕ ಭವನ, ಯಾತ್ರಿ ನಿವಾಸ ನಿರ್ಮಿಸಬೇಕು ಎಂದೂ ಕೋರಿತು.
ನಿವೃತ್ತ ಅಧೀಕ್ಷಕ ಎಂಜಿನಿಯರ್ ರಮೇಶ ಜಂಗಲ್, ಮಲಪ್ರಭಾ ಮುಖ್ಯ ಎಂಜಿನಿಯರ್ ಅಶೋಕ ವಾಸನದ, ರಮೇಶ ಕೋಲಕಾರ, ಪ್ರಥಮ ದರ್ಜೆ ಗುತ್ತಿಗೆದಾರರಾದ ಬಸನಗೌಡ ಕಾಮನಗೌಡರ, ಶಿವನಗೌಡ ಪಾಟೀಲ, ಇತರರು ಇದ್ದರು.