ಪತ್ರಕರ್ತರು ತಂತ್ರಜ್ಞಾನ ರೂಢಿಸಿಕೊಳ್ಳಬೇಕು

sangha
Published on

ಕುಶಾಲನಗರ:

ಬದಲಾದ ಕಾಲಘಟ್ಟದಲ್ಲಿ ಪತ್ರಕರ್ತರು ತಂತ್ರಜ್ಞಾನವನ್ನು ಹೆಚ್ಚು ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಹೇಳಿದರು.

ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಗುರುವಾರ ಇಲ್ಲಿ ಏರ್ಪಡಿಸಿದ್ದ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ ಮತ್ತು ಕುಶಾಲನಗರ ಹೋಬಳಿ ಪತ್ರಕರ್ತರ ಸಂಘದ ಬೆಳ್ಳಿಹಬ್ಬ ಸ್ಮರಣ ಸಂಚಿಕೆ ಬೆಳ್ಳಿಪಯಣ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಮನುಷ್ಯನಿಗೆ ವಯಸ್ಸಾದಂತೆ ಮಾಗುತ್ತಾ ಹೋಗುತ್ತಾನೆ. ಆದರೆ ಸಂಘಟನೆಗಳು ಹಳೆಯದಾದಷ್ಟು ಗಟ್ಟಿಗೊಳ್ಳುತ್ತವೆ. ಪತ್ರಕರ್ತ ಸಂಘಟನೆಗಳು ಹೆಚ್ಚು ಶಕ್ತಿಯುತವಾಗಬೇಕು. ಸದಸ್ಯತ್ವ ಕೊಡುವಾಗ ನೈಜ ಪತ್ರಕರ್ತರಿಗೆ ಮಾತ್ರ ಅವಕಾಶ ಕೊಡಬೇಕು ಎಂದರಲ್ಲದೆ, ಮಡಿಕೇರಿ ಮಾದರಿಯಲ್ಲಿ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲೂ ಪ್ಲಾಸ್ಟಿಕ್ ಬಾಟಲಿಗಳ ನಿಷೇಧಕ್ಕೆ ಸ್ಥಳೀಯ ಪತ್ರಕರ್ತರು ಸಂಬAಧಿಸಿದವರ ಜತೆ ವ್ಯವಹರಿಸಿ ಕಾರ್ಯರೂಪಕ್ಕೆ ತರುವಂತಾಗಬೇಕು ಎಂದು ಹೇಳಿದರು.

ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಿದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಪತ್ರಿಕೋದ್ಯಮದ ಬದುಕು ಕಬ್ಬಿಣದ ಕಡಲೆ ಇದ್ದಂತೆ. ಈಗಿನ ಪತ್ರಕರ್ತರಲ್ಲಿ ವರದಿಗಾರಿಕೆಯ ಆಸಕ್ತಿ ಕಡಿಮೆ ಆಗುತ್ತಿದೆ. ಸುದ್ದಿ ಮಾಡಿದ ನಂತರ ಫಾಲೋ ಅಪ್ ಇರಬೇಕು. ತನಿಖಾ ವರದಿಗಳು ತಾರ್ಕಿಕ ಅಂತ್ಯಕ್ಕೆ ತಲುಪಿಸುವ ಬದ್ಧತೆ ಇರಬೇಕು ಎಂದರು.

ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ಜಿಲ್ಲಾ ಸಂಘದ ಖಜಾಂಚಿ ಆನಂದ್, ಖಜಾಂಚಿ ಕುಡೆಕಲ್ಲು ಗಣೇಶ್, ನಾಗರಾಜ ಶೆಟ್ಟಿ, ಟಿ.ಆರ್. ಪ್ರಭುದೇವ್ ಇದ್ದರು.

ಪತ್ರಕರ್ತರಾದ ಕೆ.ಕೆ. ನಾಗರಾಜ ಶೆಟ್ಟಿ, ಎಂ.ಎನ್. ಚಂದ್ರಮೋಹನ್, ಜಯಪ್ರಕಾಶ್, ಕೆ.ಬಿ ಶಂಷುದ್ದೀನ್, ಟಿ.ಆರ್.ಪ್ರಭುದೇವ್, ವಿನೋದ್, ಚೈತನ್ಯ ಚಂದ್ರಮೋಹನ್, ಕೆ.ಜೆ. ಶಿವರಾಜ್ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು ಸ್ವೀಕರಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net