

ಹರಿಹರ: ಹರಿಯಾಣ, ಮಣಿಪುರ ಸೇರಿದಂತೆ ದೇಶದ ಇತರೆಡೆ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಸಂಘ ಪರಿವಾರವೇ ಕಾರಣ ಎಂದು ಎಸ್‌ಡಿಪಿಐ ಸಂಘಟನೆ ಕಾರ್ಯಕರ್ತರು ಆರೋಪಿಸಿದರು.
ಎಲ್ಲ ಕೃತ್ಯಗಳಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ಶಶಿಧರಯ್ಯ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
72 ದಿನಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಗಲಭೆ, ಕೊಲೆ, ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಗಲಭೆ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಮುಖಂಡರು ದೂರಿದರು.ಹರಿಯಾಣದ ಗಲಭೆ, ಕರ್ನಾಟಕದ ವಿಜಯಪುರದಲ್ಲಿ ಮಹಿಳೆ ಮೇಲಿನ ಅತ್ಯಾಚಾರ-ಕೊಲೆ, ವಿಟ್ಲದಲ್ಲಿ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಎಲ್ಲ ಪ್ರಕರಣದಲ್ಲಿ ಸಂಘ ಪರಿವಾರ, ಬಿಜೆಪಿಯವರ ಕೈವಾಡವಿದೆ ಎಂದು ಆರೋಪಿಸಿದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಜಬೀವುಲ್ಲಾ, ಜಿಲ್ಲಾ ಉಪಾಧ್ಯಕ್ಷ ರಜ್ವಿ ರಿಯಾಜ್ ಅಹಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್, ಫಯಾಜ್ ಅಹ್ಮದ್, ಎ.ಆರ್. ತಾಹೀರ್, ಶಕೀಲ್ ಮತ್ತಿತರರಿದ್ದರು.