ಸಂಗೀತಕ್ಕಿದೆ ನೋವು ಮರೆಸುವ ಶಕ್ತಿ; ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಅಭಿಪ್ರಾಯ

08TMK_yuva_Sowrabha
Published on

ತುಮಕೂರು : ಇಂದಿನ ಆಧುನಿಕ ಜೀವನ ಶೈಲಿಯಿಂದ ಉಂಟಾಗುವ ಮಾನಸಿಕ ಒತ್ತಡಗಳಿಂದ ಹೊರಗೆ ಬರಲು ಸಂಗೀತ ಉತ್ತಮ ಸಾಧನವಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಅಭಿಪ್ರಾಯಪಟ್ಟರು.

ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ವರ ಸಿಂಚನ ಸುಗಮ ಸಂಗೀತ ಜನಪದ ಕಲಾಸಂಸ್ಥೆ ಹಾಗೂ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಬುಧವಾರ ಯುವ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತಕ್ಕೆ ಎಂಥಹ ನೋವನ್ನಾದರೂ ಕಡಿಮೆ ಮಾಡುವ ಅಪಾರವಾದ ಶಕ್ತಿಯಿದೆ, ಸಾಮಾಜಿಕ ಜಾಲತಾಣ ಬಳಕೆಯಿಂದ ದೈಹಿಕ ಚಟುವಟಿಕೆಗಳನ್ನೇ ಮರೆತಿರುವ ಇಂದಿನ ಯುವಕರಲ್ಲಿ ಕಲೆ ಮತ್ತು ದೇಸೀ ಸಂಸ್ಕೃತಿಯ ಬಗೆಗಿನ ಆಸಕ್ತಿ ಹೆಚ್ಚುವಂತೆ ಮಾಡುವುದು ಅಗತ್ಯ ಎಂದರು.

ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿ ವರ್ಗಕ್ಕೂ ವಿಶೇಷವಾಗಿ ಯುವ ಸಮುದಾಯವನ್ನು ಕಲಾಕ್ಷೇತ್ರದೆಡೆಗೆ ಕರೆತರುವ ಸದುದ್ದೇಶದಿಂದ ಯುವಸೌರಭ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಅದರ ಸದುಪಯೋಗ ಪಡೆದುಕೊಂಡು ಕಲೆ ಪ್ರೋತ್ಸಾಹಿಸಬೇಕು ಎಂದರು.

ಜಿಲ್ಲಾಸ್ಪತ್ರೆಯ ಹಿರಿಯ ನೇತ್ರತಜ್ಞ ಡಾ.ದಿನೇಶ್‌ಕುಮಾರ್ ಮಾತನಾಡಿ, ಆಧುನಿಕ ಜೀವನ ಶೈಲಿಗೆ ಮಾರು ಹೋಗಿರುವ ಯುವ ಪೀಳಿಗೆಯಲ್ಲಿ ಕಲೆ, ಸಾಹಿತ್ಯ, ಜಾನಪದ, ಸಂಗೀತದ ಮೂಲಕ ದೇಸೀ ಭಾವನೆ ಬಿತ್ತಲು ಇಂತಹ ಕಾರ್ಯಕ್ರಮಗಳಿಂದ ಸಾಧ್ಯವಾಗುತ್ತದೆ, ಜೀವನೋಪಾಯ ಹಾಗೂ ಜೀವನ ಕೌಶಲಗಳು ಒಂದಕ್ಕೊಂದು ಪೂರಕವಾಗಿದ್ದು, ಜೀವನಶೈಲಿ ಉತ್ತಮವಾಗಿಸಿಕೊಳ್ಳಲು ನಮ್ಮಲ್ಲಿ ಕೌಶಲ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿಶ್ವೇಶ್ವರ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತಗಳು ಮಾನವನ ಜೀವನದ ಅವಿಭಾಜ್ಯ ಅಂಗವಾಗಿವೆ. ಕಲೆಯು ಮಾನವನ ಜೀವನವನ್ನು ವಿಕಸನದತ್ತ ಕೊಂಡೊಯ್ಯುವ ಸಾಧನವಾಗಿದೆ. ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ, ಮಾನಸಿಕವಾಗಿ ಸದೃಢರಾಗಲು ಸಂಗೀತ ಸಹಕಾರಿ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ವೃತ್ತಿ ಹಾಗೂ ಪ್ರವೃತ್ತಿಗಳೆರಡನ್ನು ಸರಿಯಾದ ಮಾರ್ಗದಲ್ಲಿ ರೂಢಿಸಿಕೊಂಡಲ್ಲಿ ಜೀವನದ ಸಾರ್ಥಕತೆ ಸಾಧ್ಯ ಎಂದರು.

ಸಂಗೀತ ರಸದೌತಣ : ಪ್ರಮೋದ್, ಮನ್ವಿತ, ಸುಧೀರ್ ಹಾಗೂ ಪವನ್ ತಂಡ ಪ್ರಸ್ತುತಪಡಿಸಿದ ವಾದ್ಯ ಸಂಗೀತದಲ್ಲಿ ಕರ್ನಾಟಕ ಸಂಗೀತದ ನವರಾಗ ಮಾಲಿಕೆ, ಹಿಂದೂಸ್ಥಾನಿ ಸಂಗೀತ ಶೈಲಿಯಲ್ಲಿ ವಚನ, ಸುಭದ್ರ ನಾಟಕದ ಪೌರಾಣಿಕ ರಂಗಗೀತೆ, ಚಲನಚಿತ್ರ ಗೀತೆಗಳನ್ನು ಪ್ರೇಕ್ಷಕರು ಮನದುಂಬಿಕೊಂಡರು. ಕಾವ್ಯ ಮತ್ತು ತಂಡದಿಂದ ಜನಪದ ಹಾಗೂ ಭಾವಗೀತೆ ಗಾಯನ, ನೀಲಾಲಯ ನೃತ್ಯ ಕೇಂದ್ರದಿಂದ ಭರತ ನಾಟ್ಯ ನೃತ್ಯ ರೂಪಕ, ಕೆಂಪಮ್ಮ ಮತ್ತು ತಂಡದಿಂದ ಮಹಿಳಾ ಕಂಸಾಳೆ, ತುರುವೇಕೆರೆ ಸತೀಶ್ ಮತ್ತು ತಂಡದಿಂದ ಪೂಜಾ ಕುಣಿತ ಹಾಗೂ ಕುದೂರಿನ ಗೋವಿಂದರಾಜು ಮತ್ತು ತಂಡದಿಂದ ಗೊಂಬೆ ಕುಣಿತ, ಜಿಲ್ಲಾಸ್ಪತ್ರೆಯ ಶುಶ್ರೂಷ ಶಾಲೆಯ ವಿದ್ಯಾರ್ಥಿಗಳಿಂದ ಸಮೂಹ ಗಾಯನ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಕರೊನಾ ಅಲೆಯ ನಂತರ ಸಾಂಸ್ಕೃತಿಕ ಕ್ಷೇತ್ರ ಗರಿಗೆದರಿದೆ. ಜಿಲ್ಲೆಯು ಜಾನಪದ ಕಲೆ ಹಾಗೂ ಪೌರಾಣಿಕ ರಂಗಭೂಮಿಯಿಂದ ಎಲ್ಲರ ಗಮನ ಸೆಳೆದಿದೆ. ಡಾ.ಗುಬ್ಬಿ ವೀರಣ್ಣರ ಶ್ರಮದಿಂದ ಕೇವಲ ಮಾತುಗಳಲ್ಲಿ ಇದ್ದ ಆಧುನಿಕ ನಾಟಕ ಪ್ರಕಾರ ಮುನ್ನೆಲೆಗೆ ಬಂದು ವಿಶೇಷ ಸ್ಥಾನ-ಮಾನ ಗಿಟ್ಟಿಸಿಕೊಂಡಿದೆ ಎಂದರಲ್ಲದೆ ಬಯಲು ಸೀಮೆ ರಂಗಾಯಣ ಜಿಲ್ಲೆಯಲ್ಲಿ ಸ್ಥಾಪಿಸಲು ಪ್ರತಿಯೊಬ್ಬ ಕಲಾಸಕ್ತರು ಒಕ್ಕೊರಲಿನಿಂದ ಕೈಜೋಡಿಸಬೇಕು. ಉಗಮ ಶ್ರೀನಿವಾಸ್ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಯುವಕರಲ್ಲಿ ಅಡಗಿರುವ ಪ್ರತಿಭೆಯ ಮೇಲೆ ಬೆಳಕು ಚೆಲ್ಲಲು ಸರ್ಕಾರವು ಯುವ ಸೌರಭ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಯುವಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಕೆ.ಶ್ರೀನಿವಾಸ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net