ಅಮರ ಹಿರೇಮಠಗೆ ವಚನ ಸಂಗೀತ ವಿಭೂಷಣ ಪ್ರಶಸ್ತಿ

Basava Samiti
Published on

ಕಲಬುರಗಿ: ನಗರದ ಬಸವ ಸಮಿತಿ ಅನುಭವ ಮಂಟಪದಲ್ಲಿ ಸೋಮನಾಥಪ್ಪ ಬಸವಣ್ಣಪ್ಪ ಖೂಬಾ ಸ್ಮರಣಾರ್ಥ ಭಾನುವಾರ ನಡೆದ ಅರಿವಿನ ಮನೆ ಕಾರ್ಯಕ್ರಮದಲ್ಲಿ ಅಮರ ಕಲಾವೃಂದದ ಅಮರ ಹಿರೇಮಠ ಅವರ ಸಂಗೀತ ಕ್ಷೇತ್ರದ ಜೀವಮಾನದ ಸಾಧನೆ ಪರಿಗಣಿಸಿ ೨೦೨೪ರ ಡಾ.ಬಿ.ಡಿ. ಜತ್ತಿ ವಚನ ಸಂಗೀತ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ನೀಡಿದ ಬಸವ ಸಮಿತಿ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ ಮಾತನಾಡಿ, ಅಮರ ಹಿರೇಮಠ ಅವರು ಡಾ.ಬಿ.ಡಿ.ಜತ್ತಿ ಒಡನಾಟದಲ್ಲಿ ಬೆಳೆದವರು. ಶರಣರ ವಚನ, ನಾಟಕಗಳನ್ನು ಜನಮನದಲ್ಲಿ ಬಿತ್ತಿದ ಅವರ ಅನುಪಮ ಸೇವೆ ಪರಿಗಣಿಸಿ ಖೂಬಾ ಮನೆತನದಿಂದ ೨೫,೦೦೦ ರೂ. ನಗದಿನೊಂದಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದರು.

ಸಮಿತಿ ಉಪಾಧ್ಯಕ್ಷೆ ಡಾ ಜಯಶ್ರೀ ದಂಡೆ ಪ್ರಾಸ್ತಾವಿಕ ಮಾತನಾಡಿ, ಬಸವ ಸಮಿತಿಯು ವಚನ ಸಾಹಿತ್ಯದಲ್ಲಿ ಸಂಶೋಧನೆ ಮಾಡಿದವರಿಗೆ ಡಾ.ಬಿ.ಡಿ.ಜತ್ತಿ ಸಂಶೋಧನಾ ಹಾಗೂ ಡಾ.ಬಿ.ಡಿ.ಜತ್ತಿ ವೈರಾಗ್ಯ ನಿಧಿ ಅಕ್ಕ ಪ್ರಶಸ್ತಿ ನೀಡಿ ಗೌರವಿಸುತ್ತಿದೆ ಎಂದರು.

ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ವೀರಣ್ಣ ದಂಡೆ ಮಾತನಾಡಿ, ಅಮರ ಹಿರೇಮಠರ ವಚನ ಸಂಗೀತದ ಸೇವೆ ನಿಸ್ವಾರ್ಥವಾದದು ಎಂದರು. ದತ್ತಿ ದಾಸೋಹಿ ರಾಜೇಂದ್ರ ಖೂಬಾ ಮಾತನಾಡಿದರು.

ರಾಷ್ಟ್ರ ಪ್ರಶಸ್ತಿ ವಿಜೇತ, ಅಲ್ಲಮ ಸಿನಿಮಾ ಸಂಗೀತ ನಿರ್ದೇಶಕ ಬಾಪು ಪದ್ಮನಾಭ, ಡಾ.ಕೆ.ಎಸ್. ವಾಲಿ, ಬಂಡಪ್ಪ ಕೆಸೂರ ಇದ್ದರು. ಸಮಿತಿ ಕಾರ್ಯದರ್ಶಿ ಡಾ.ಆನಂದ ಸಿದ್ಧಾಮಣಿ ನಿರೂಪಣೆ ಮಾಡಿದರು. ತಬಲಾ ಕಲಾವಿದ ರಮಕಾಂತ ರಾವುತ್, ಮೃದಂಗ ಕಲಾವಿದ ಸುನಿಲ್​ ಸುಬ್ರಮಣ್ಯ, ಘಟಂ ಕಲಾವಿದ ಶ್ರೀನಿಧಿ ಕೌಂಡಿಣ್ಯ, ಕೊಳಲು ಕಲಾವಿದ ಚೆನ್ನಯ್ಯ ಸಗರಮಠ ಅವರು ಸಂಗೀತ ಜುಗಲ್ ಬಂದಿ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net