ಸಂಗೀತ ವಿವಿಯ ವಿಶೇಷ ಸಂಗೀತ ಪರೀಕ್ಷೆ ಫಲಿತಾಂಶ ಪ್ರಕಟ

Published on

ಮೈಸೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಪ್ರಥಮ ಬಾರಿಗೆ ನಡೆಸಿದ್ದ 2023-24ನೇ ಸಾಲಿನ ವಿಶೇಷ ಸಂಗೀತ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ.

ವಿಶೇಷ ಸಂಗೀತ, ನೃತ್ಯ, ತಾಳವಾದ್ಯದಲ್ಲಿ ಒಟ್ಟು ವಿವಿಧ 9 ವಿಭಾಗಗಳಲ್ಲಿ ಪರೀಕ್ಷೆಗಳು ನಡೆದಿದ್ದು, ಇದರಲ್ಲಿ ಶೇ.90ರಷ್ಟು ಪರೀಕ್ಷಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್ ಬೆಟ್ಟಕೋಟೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ 18 ಕೇಂದ್ರಗಳಲ್ಲಿ ಆಯೋಜಿಸಿದ್ದ ಪರೀಕ್ಷೆಗೆ 17,788 ವಿದ್ಯಾರ್ಥಿಗಳು ಹಾಗೂ 3500 ಶಿಕ್ಷಕರು ನೋಂದಾಯಿಸಿಕೊಂಡಿದ್ದು, ಶೇ.90ರಷ್ಟು ಪರೀಕ್ಷಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಹೇಳಿದರು.

ಮೊದಲ ಬಾರಿಗೆ ವಿಶ್ವವಿದ್ಯಾಲಯವು ಈ ಪರೀಕ್ಷೆಗಳನ್ನು ಆಯೋಜಿಸಿದ್ದು, ಫಲಿತಾಂಶ ವೀಕ್ಷಿಸಲು ವಿಶ್ವವಿದ್ಯಾಲಯದ ವೆಬ್ ಸೈಟ್ ನೋಡಬಹುದು. ಜ.18ರಂದು ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆಯಲಿದ್ದು, ಅದಾದ ಕೆಲವು ದಿನದಲ್ಲೇ ಪ್ರತ್ಯೇಕ ಘಟಿಕೋತ್ಸವದಲ್ಲಿ ವಿಶೇಷ ಪರೀಕ್ಷೆ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು ಎಂದರು.

ಪ್ರತಿ ಅಭ್ಯರ್ಥಿಯನ್ನೂ ಖುದ್ದಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಿ ವ್ಯವಸ್ಥಿತವಾಗಿ ಫಲಿತಾಂಶ ನೀಡಲಾಗಿದೆ. 100ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರುವ ವಿಭಾಗಕ್ಕೆ 3 ಅಗ್ರ ರ‌್ಯಾಂಕ್ ಹಾಗೂ 100ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇದ್ದ ವಿಭಾಗಕ್ಕೆ ಒಂದು ರ‌್ಯಾಂಕ್ ನೀಡಲಾಗಿದೆ ಎಂದು ಹೇಳಿದರು.

2024-25ನೇ ಸಾಲಿಗೆ ನೋಂದಣಿ ಪ್ರಕ್ರಿಯೆ ಜ. 16ರಿಂದ ಆರಂಭ ಆಗಲಿದೆ. ಕಳೆದ ವರ್ಷ ಪರೀಕ್ಷೆ ಆಯೋಜನೆಯಲ್ಲಿ ಕೆಲವು ಗೊಂದಲಗಳು ಆಗಿದ್ದವು. ಈ ವರ್ಷ ಏಪ್ರಿಲ್-ಮೇ ನಲ್ಲಿಯೇ ಪರೀಕ್ಷೆ ಆಯೋಜಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.

ಮುಂಬಯಿ, ಚೆನ್ನೈ, ಕುವೈತ್, ದುಬೈ ಸೇರಿದಂತೆ ಇನ್ನಿತರೆ ಕಡೆಗಳಲ್ಲೂ ಪರೀಕ್ಷಾ ಕೇಂದ್ರಗಳನ್ನು ತೆರೆಯುವಂತೆ ಬೇಡಿಕೆ ಬಂದಿದೆ. ಆದರೆ ಯುಜಿಸಿಯ ಸಂಗೀತ ವಿಶ್ವ ವಿದ್ಯಾಲಯದ ನಿಯಮದಂತೆ ರಾಜ್ಯ ವ್ಯಾಪ್ತಿಯಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಹೊರ ರಾಜ್ಯ ಹಾಗೂ ದೇಶಗಳಲ್ಲೂ ಪರೀಕ್ಷಾ ಕೇಂದ್ರಗಳು ಅಥವಾ ಆನ್‌ಲೈನ್ ಪರೀಕ್ಷೆ ಆಯೋಜನೆಗೆ ಯುಜಿಸಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತಿದೆ ಎಂದರು.

ವಿಶ್ವವಿದ್ಯಾಲಯದ ಕುಲಸಚಿವ ಎಂ.ಜಿ. ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net