ಸೋನೆ ಮಳೆಯಲ್ಲಿ ಸಂಗೀತ ಸುಧೆ

mysore
Published on

ಮೈಸೂರು: ಹೊರಗಡೆ ಸೋನೆ ಮಳೆ, ಒಳಗಡೆ ಸಂಗೀತ ಸುಧೆ…! ಮೈಸೂರು ಅರಮನೆ ವೇದಿಕೆ ಶನಿವಾರ ಸಂಜೆ ವರ್ಷಧಾರೆ-ಸಂಗೀತಧಾರೆಗೆ ಸಾಕ್ಷಿಯಾಯಿತು.


ಮಧ್ಯಾಹ್ನದಿಂದಲೇ ಜಿಟಿ ಜಿಟಿ ಮಳೆ ಸುರಿಯಿತು. ಇದರ ಪರಿಣಾಮ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಮೇಲೆಯೂ ಆಯಿತು. ಹೀಗಾಗಿ ಅರಮನೆ ಎದುರಿನ ಬಯಲು ವೇದಿಕೆ ಬದಲಾಗಿ ಅದರ ಪಕ್ಕದಲ್ಲಿರುವ ಪೆಂಡಾಲ್ ಒಳಗಿನ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮಳೆಯ ನಡುವೆಯೂ ನಿರಾತಂಕವಾಗಿ ನಡೆಯಿತು.


ನಿರಂತರವಾಗಿ ಸುರಿದ ಮಳೆಯಿಂದ ಅರಮನೆಯತ್ತ ಹೆಚ್ಚಿನ ಪ್ರಮಾಣದಲ್ಲಿ ಜನರು ಬರಲಿಲ್ಲ. ಬಂದವರು ಪೆಂಡಾಲ್ ಒಳಗೆ ಆಶ್ರಯ ಪಡೆದುಕೊಂಡು ಶಾಸ್ತ್ರೀಯ ಸಂಗೀತ, ನೃತ್ಯ ಆಸ್ವಾದಿಸಿದರು.


ಚಳಿಗೆ ಮೈವೊಡ್ಡಿ ಕುಳಿತ ಸಂಗೀತಾಸಕ್ತರಿಗೆ ನಿನಾದವು ಬೆಚ್ಚನೆಯ ಮುದ ನೀಡಿತು. ಮಳೆಯಲ್ಲಿ ಒದ್ದೆಯಾದ ಸಭಿಕರು ಸಂಗೀತ ರಾಗಲಹರಿಯಲ್ಲೂ ಮಿಂದೆದ್ದರು.


ಕೆ.ಎಲ್.ಹಂಸಲೇಖ ಮತ್ತು ತಂಡ ಭರತನಾಟ್ಯ ಮನಸೂರೆಗೊಳಿಸಿತು. ಬಾಲಮುರಳಿ ಕೃಷ್ಣನ್ ರಚನೆಯ ಪುಷ್ಪಾಂಜಲಿ ಗೀತೆಯನ್ನು ಆರಭಿ ರಾಗ, ಆದಿ ತಾಳದಲ್ಲಿ ನೃತ್ಯವನ್ನು ಸೊಗಸಾಗಿ ಪ್ರಸ್ತುತ ಪಡಿಸಿದರು. ಡಿ.ವಿ.ಪ್ರಸನ್ನ ಕುಮಾರ್ ರಚನೆಯ ಪದಂ ಗೀತೆಯನ್ನು ಆಭೋಗ ರಾಗ, ಮಿಶ್ರಛಾಪು ತಾಳದಲ್ಲಿ ಮತ್ತೊಂದು ನೃತ್ಯ ಪ್ರದರ್ಶನವನ್ನು ಸಭಿಕರ ಎದುರು ತೆರೆದಿಟ್ಟರು.


‘ಕಿರಗೂರಿನ ಗಯ್ಯಳಿಗಳು’, ‘ಲಾಸ್ಟ್ ಬಸ್’ ಸಿನಿಮಾದ ನಟಿ ಮಾನಸ ಜೋಶಿ ತಂಡದವರ ಕಥಕ್ ನೃತ್ಯ ಕಣ್ಮನ ಸೆಳೆಯಿತು. ಮೈಸೂರು ಸಂಸ್ಥಾನದ ‘ಕಾಯೋ ಶ್ರೀಗೌರಿ’ ಗೀತೆಗೆ ವಿಶಿಷ್ಟವಾಗಿ ಕಥಕ್ ನೃತ್ಯ ಪ್ರಸ್ತುತಪಡಿಸಿದರು. ಮೂಲ ಗೀತೆಯನ್ನು ಆಧಾರವಾಗಿಟ್ಟುಕೊಂಡು ಸಂಗೀತಗಾರರಾದ ಪ್ರವೀಣ್ ಡಿ.ರಾವ್ ಕಥಕ್ ನೃತ್ಯಕ್ಕೆ ಬೇಕಾಗುವಂತೆ ಮರುವಿನ್ಯಾಸ ಮಾಡಿದ್ದರು. ಇದರ ಪರಿಕಲ್ಪನೆಯಲ್ಲಿ ನೃತ್ಯ ಸಂಯೋಜನೆಯನ್ನು ಮಾನಸ ಜೋಶಿ ಅಂದವಾಗಿ ಅನಾವರಣಗೊಳಿಸಿದರು. ಬಿಲಾವಲ್ ರಾಗ, ಚೌತಾಲ್ ತಾಳದಲ್ಲಿ ನೃತ್ಯ ಕಟ್ಟಿಕೊಟ್ಟರು.


ಬಳಿಕ ವಯೋಲಿನ್ ಮತ್ತು ಸರೋದ್ ನಡುವಿನ ಜುಗಲ್ ಬಂದಿ ಸಂಗೀತ ಲಹರಿಯ ಧೂಳೆಬ್ಬಿಸಿತು. ವಿದ್ವಾನ್ ಮೈಸೂರು ಎನ್.ಕಾರ್ತಿಕ ಅವರ ವಯೋಲಿನ್ ನಿನಾದ ಮತ್ತು ಇಂದ್ರಾಯುಧ್ ಮಜುಂದಾರ್ ಅವರ ಸರೋದ ಲಹರಿ ಸಭಿಕರಿಗೆ ಸಂಗೀತ ರಸದೌತಣವನ್ನೇ ಉಣಬಡಿಸಿತು.


ನಂತರ ಪ್ರಸ್ತುತಪಡಿಸಿದ ಮುಂಬೈನ ಅಶ್ವಿನಿ ದೇಶಪಾಂಡೆ ಅವರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ ಸಂಗೀತಾಸಕ್ತರ ಮನತಣಿಸಿತು.
ಪಂಡಿತ್ ವಿಶ್ವಮೋಹನ್ ಭಟ್ ಅವರ ಮೋಹನ ವೀಣಾ ಮತ್ತು ವಿ.ಸುನಿತಾ ಬುಯಾನ್ ಅವರ ವಯೋಲಿನ್‌ನಲ್ಲಿ ಪ್ರಸ್ತುತಗೊಂಡ ಫ್ಯೂಷನ್ ಜುಗಲ್‌ಬಂದಿ ಸಂಗೀತ ಝೇಂಕಾರ ಸುಮಧುರ ಅನುಭವ ಉಂಟು ಮಾಡಿತು. ಗದಗಿನ ಉಷಾ ಯು.ಕಾರಂತ ಮತ್ತು ತಂಡದಿಂದ ಸುಗಮ ಸಂಗೀತವೂ ರಂಜಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net