

ಮಂಡ್ಯ: ಇಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳು ಸಂಘಟಿತ ಹೋರಾಟದ ಮೂಲಕ ರಾಜಕೀಯ ಮೀಸಲಾತಿಯನ್ನು ರಕ್ಷಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಮಂಜುನಾಥ್ ಸಲಹೆ ನೀಡಿದರು.
ತಾಲೂಕಿನ ಸಂತೆಕಸಲಗೆರೆ ಗ್ರಾಮದ ಭೂಮಿ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಆಯೋಜಿಸಿದ್ದ ಅರಸು ಜನ್ಮ ದಿನಾಚರಣೆ ಮತ್ತು ತಗ್ಗಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹಿಂದುಳಿದ ವರ್ಗಗಳ ಸಂಘಟನಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯ ಸಂಸ್ಥೆಗಳ ಮೀಸಲಾತಿ ಹಾಗೂ ಹಿಂದುಳಿದ ವರ್ಗಗಳಿಗೆ ಸಿಗಬೇಕಿರುವ ಸವಲತ್ತುಗಳ ಕುರಿತು ಜಾಗೃತಿ ಮೂಡಿಸಬೇಕು. ಹಿಂದುಳಿದ ವರ್ಗಗಳಿಗೆ ಭವಿಷ್ಯದಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಲು ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದರು.
ಜಿಲ್ಲಾ ಕುರುಬರ ಸಂಘದ ಮಾಜಿ ಅಧ್ಯಕ್ಷ ಕೆ.ಎಚ್.ನಾಗರಾಜು ಮಾತನಾಡಿ, ಅತಿ ಹಿಂದುಳಿದ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಡಿ.ದೇವರಾಜ ಅರಸು ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವುಗಳನ್ನು ಮುನ್ನಡೆಸಿದ್ದರು. ಈಗ ಹಿಂದುಳಿದ ವರ್ಗಗಳ ಮೀಸಲಾತಿಗೆ ಅಪಾಯ ಬಂದೊದಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಎಚ್.ಕಾಂತರಾಜು ನೇತೃತ್ವದ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಗಣತಿಯನ್ನು ಸರ್ಕಾರ ಸ್ವೀಕರಿಸಬೇಕು. ಅವುಗಳಲ್ಲಿ ಲೋಪವಿದ್ದರೆ ಸರಿಪಡಿಸಿಕೊಳ್ಳಬೇಕು. ಆದರೆ ಇದಾವುದನ್ನೂ ಮಾಡದೆ ಇಡೀ ವರದಿಯನ್ನು ನನೆಗುದಿಗೆ ತಳ್ಳಿದ್ದು, ಇದರಿಂದ ಹಲವಾರು ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಹಿಂದುಳಿದ ಸಮುದಾಯಗಳು ಪಕ್ಷಾತೀತವಾಗಿ ಒಗ್ಗೂಡಿ ರಾಜಕೀಯವಾಗಿ ನಿರ್ಣಾಯಕ ಶಕ್ತಿಯಾಗಬೇಕು. ಮೀಸಲಾತಿಯಂತಹ ವಿಚಾರ ಬಂದಾಗ ಬೀದಿಗಿಳಿದು ಹೋರಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಕೃಷ್ಣ ಹಿಂದುಳಿದ ವರ್ಗಗಳ ಸವಾಲುಗಳ ಕುರಿತು ವಿಚಾರ ಮಂಡಿಸಿದರು. ಜಿಲ್ಲಾ ಗಂಗಾಮತ ಸಂಘದ ಕಾರ್ಯದರ್ಶಿ ಸಂತೆಕಸಲಗೆರೆ ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖಂಡರಾದ ಟಿ.ಡಿ.ನಾಗರಾಜು, ಕಾಂತರಾಜು, ಲಕ್ಷ್ಮೀ, ತಗ್ಗಹಳ್ಳಿ ಮಹೇಶ್, ಸೂನಗಹಳ್ಳಿ ಶಿವು, ಪ್ರದೀಪ್, ವೆಂಕಟೇಶ್, ಶೇಖರ್, ಪುಟ್ಟಸ್ವಾಮಿ, ಮಹೇಶ್, ಶಿವಕುಮಾರ್, ಆನಂದ್, ಮಂಗಲ ಶಿವಣ್ಣ, ನಾಗೇಶ್ ಇತರರಿದ್ದರು.