

ಮಂಗಳೂರು: ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ನೇತೃತ್ವದಲ್ಲಿ ಮಂಗಳೂರು ಕ್ರೈಸ್ತ ಬಂಧುಗಳ ನಿಯೋಗ ಶನಿವಾರ ನಗರದ ಸಂಘನಿಕೇತನ ಪ್ರತಾಪನಗರದಲ್ಲಿ ಕಳೆದ 75 ವರ್ಷದಿಂದ ಆಚರಿಸಿಕೊಂಡು ಬರುತ್ತಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ಭೇಟಿ ನೀಡಿ ಫಲ-ಪುಷ್ಪವನ್ನು ಅರ್ಪಿಸಿ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಮಂಗಳೂರು ಕ್ರೈಸ್ತ ಸಭಾದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ತಲಿನೋ, ಗಣೇಶೋತ್ಸವದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಸಂಘನಿಕೇತನದಲ್ಲಿ 75ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದ್ದು, ಇಲ್ಲಿಯ ಗಣೇಶೋತ್ಸವವಕ್ಕೆ ಸ್ವಾತಂತ್ರ್ಯ ಚಳುವಳಿಯ ಸಂಬಂಧವಿದೆ. ಬಾಲಗಂಗಾಧರ ತಿಲಕ್ ಅವರು ಮನೆ-ಮನೆಯಲ್ಲಿ ಆಚರಿಸುತ್ತಿದ್ದ ಗಣೇಶ ಚತುರ್ಥಿಯನ್ನು ಸಮಾಜಕ್ಕೆ ತಂದು ಸಾರ್ವತ್ರಿಕವಾಗಿ ಆಚರಿಸಿ, ಸಮಾಜದಲ್ಲಿ ಸಾಮರಸ್ಯದ ಜೀವನ ನಡೆಸುವುದನ್ನು ಕಲಿಸಿಕೊಟ್ಟರು ಎಂದರು.
ಕ್ಯಾಥೋಲಿಕ್ ಸಭಾದ ಅಧ್ಯಕ್ಷ ಸ್ಟ್ಯಾನಿ ಲೋಬೊ ಹಾಗೂ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಸಂಸ್ಥಾಪಕ ಫ್ರಾೃಂಕ್ಲಿನ್ ಮೊಂತೆರೊ, ಪ್ರಾನ್ಸಿಸ್ ಪಿಂಟೋ, ಗ್ರೆಗೋರಿ ಡಿಸಿಲ್ವಾ, ಅನಿಲ್ ಪತ್ರಾವೋ, ವಕೀಲೆ ವ್ಯಾನಿ ಮರಿಝಾ ಪಿಂಟೋ, ಜಿಲ್ಲಾ ರೋಟರಿ ಮಾಜಿ ಗವರ್ನರ್ ರೊನಾಲ್ಡ್ ಗೌನ್ಸ್, ಆರ್‌ಎಸ್‌ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘ ಸಂಚಾಲಕ ವಿ. ನಾಗರಾಜ್, ವಿಭಾಗ ಪ್ರಚಾರಕ ಸುರೇಶ್, ಪ್ರಮುಖರಾದ ಪ್ರವಿಣ್ ಕುಮಾರ್, ಸತೀಶ್ ಪ್ರಭು, ರಘುವೀರ್ ಕಾಮತ್, ಯೋಗೀಶ್, ವಿನೋದ್ ಮೊದಲಾದವರಿದ್ದರು.