

ಕಲಘಟಗಿ: ತಾಲೂಕಿನ ಸಂಗಮೇಶ್ವರ ಗ್ರಾಮದ ಬಳಿಯಿರುವ ಸಣ್ಣ ಕೆರೆಯ ಒಡ್ಡು ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗಿದೆ.
ಕಳೆದ ಒಂದು ತಿಂಗಳಿಂದ ಸುರಿದ ಸತತ ಮಳೆಗೆ ಸಂಗಮೇಶ್ವರ ಗ್ರಾಮದ ಸಣ್ಣ ಕೆರೆ ಸಂಪೂರ್ಣ ಭರ್ತಿಯಾಗಿದೆ. ತೇವಾಂಶ ಹೆಚ್ಚಳವಾಗಿ ಬುಧವಾರ ನಸುಕಿನ ಜಾವ ಕೆರೆ ಕಟ್ಟೆ ಒಡೆದಿತ್ತು.
ದುರಸ್ತಿ ಕಾರ್ಯ: ಕೆರೆ ಕಟ್ಟೆ ಒಡೆದಿರುವ ಬಗ್ಗೆ ಮಾಹಿತಿ ತಿಳಿದ ತಕ್ಷಣ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕೆರೆ ದುರಸ್ತಿ ಕಾರ್ಯ ಕೈಗೊಂಡು ಹೆಚ್ಚಿನ ಹಾನಿ ಆಗದಂತೆ ತಡೆಯುವಲ್ಲಿ ಯಶಸ್ವಿಯಾದರು. ಜೆಸಿಬಿ ಯಂತ್ರದ ಮೂಲಕ ಒಡ್ಡಿಗೆ ಮಣ್ಣು ಹಾಕಿ ನೀರು ಪೋಲಾಗದಂತೆ ತಡೆಯಲಾಯಿತು. ಕಟ್ಟೆ ದುರಸ್ತಿ ಮಾಡದಿದ್ದರೆ ಕೆರೆ ಕೆಳಗಿನ ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸುವ ಸಾಧ್ಯತೆ ಇತ್ತು.
ಗ್ರಾಮ ಪಂಚಾಯತಿ ಅಧ್ಯಕ್ಷ ಅಧ್ಯಕ್ಷ ಸುರೇಶ ನೇಸರೇಕರ, ಸದಸ್ಯರಾದ ಕಿರಣ ಜಮದಡಕರ, ಮಂಜು ನೇಸರೇಕರ, ರೇಖಾ ಕಟಾಬ್ಳಿ, ಪಿಡಿಒ ಎ.ಎಚ್. ಮನಿಯಾರ, ಪರಶುರಾಮ ಜಾಧವ, ಮಂಜುನಾಥ ಪಿಳ್ಳುಕರ, ಹಾಲಪ್ಪ ಕಟಾಬ್ಳಿ ಹಾಗೂ ಗ್ರಾಮಸ್ಥರು ಇದ್ದರು.