ಸಾಹಿತಿಗಳಿಗೂ ಪಿಂಚಣಿ ವ್ಯವಸ್ಥೆ ಜಾರಿಯಾಗಲಿ

Sangamesha Kereppagol, Devarhipparagi, First Kannada Literature Conference, Literature, Pension System, BLDE Institute, Vamadeva Shri, Hampisaviradeva Math, Abid Gadyala,
ದೇವರಹಿಪ್ಪರಗಿಯಲ್ಲಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸರ್ವಾಧ್ಯಕ್ಷ ಸಂಗಮೇಶ ಕೆರೆಪ್ಪಗೋಳ, ಇಂಡಿ ಎಸಿ ಅಬೀದ್ ಗದ್ಯಾಳ ಉದ್ಘಾಟಿಸಿದರು. ವಾಮದೇವ ಶ್ರೀಗಳು, ಪ್ರಕಾಶ ಸಿಂದಗಿ, ಹಾಸಿಂಪೀರ ವಾಲೀಕಾರ ಇತರರಿದ್ದರು.
Published on

ದೇವರಹಿಪ್ಪರಗಿ: ಸಾಕಷ್ಟು ಸಾಹಿತಿಗಳು ಬಡತನದಲ್ಲಿ ಕಾಲ ಕಳೆಯುತ್ತಿದ್ದಾರೆ. ರಾಜ್ಯದ ಎಲ್ಲ ಸಾಹಿತಿಗಳಿಗೂ ಪಿಂಚಣಿ ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಸಮ್ಮೇಳನದ ಸರ್ವಾಧ್ಯಕ್ಷ ಸಂಗಮೇಶ ಕೆರೆಪ್ಪಗೋಳ ಹೇಳಿದರು.

ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಹಳೆಯ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರ ಜರುಗಿದ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇವರಹಿಪ್ಪರಗಿಗೆ ತನ್ನದೆ ಆದ ಇತಿಹಾಸವಿದ್ದು, ಪುರಾತನ ಕಾಲದ ಕುರುಹುಗಳು ಇಲ್ಲಿವೆ. ಪಟ್ಟಣ ಐತಿಹ್ಯ ಸ್ಥಳಗಳೊಂದಿಗೆ ಧಾರ್ಮಿಕ ನೆಲೆಬೀಡಾಗಿದೆ. ತಾಲೂಕು ಸಮಗ್ರ ಅಭಿವೃದ್ಧಿಯಾಗಬೇಕು. ತಾಲೂಕು ಕೇಂದ್ರದಲ್ಲಿ ಬಹುತೇಕ ಕಚೇರಿ ಇಲ್ಲದಿರುವುದು ವಿಷಾದನೀಯ. ಪಟ್ಟಣದಲ್ಲಿ ಸರ್ಕಾರಿ ಕನ್ನಡ ಪ್ರೌಢಶಾಲೆ ಪ್ರಾರಂಭಿಸಬೇಕು. ಕನ್ನಡ ಭವನ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದರು.

ಸಾನ್ನಿಧ್ಯ ವಹಿಸಿದ್ದ ಎಮ್ಮಿಗನೂರ ಹಂಪಿಸಾವಿರದೇವರಮಠದ ವಾಮದೇವ ಶ್ರೀಗಳು ಮಾತನಾಡಿ, ದೇಶದಲ್ಲಿ ಶುಚಿತ್ವ ಹಾಗೂ ರುಚಿತ್ವ ಇರುವ ಏಕೈಕ ಭಾಷೆ ಕನ್ನಡವಾಗಿದೆ. ಕನ್ನಡಕ್ಕಿರುವ ಶಕ್ತಿ ಯಾವ ಭಾಷೆಗೂ ಇಲ್ಲ ಎಂದರು.

ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಕನ್ನಡ ನಮ್ಮೆಲ್ಲರ ಅಸ್ಮಿತೆಯಾಗಿದ್ದು, ಹೃದಯವಂತಿಕೆಯಿಂದ ಕನ್ನಡ ಭಾಷೆ ಅರಿತರೆ ಯಶಸ್ಸು ಸಾಧ್ಯ ಎಂದರು.

ಕೊಕಟನೂರಿನ ಗದ್ದುಗೆಮಠದ ಶ್ರೀಗಳು ಆಶೀರ್ವಚನ ನೀಡಿದರು. ತಹಸೀಲ್ದಾರ್ ಪ್ರಕಾಶ ಸಿಂದಗಿ, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ತಾಲೂಕು ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ, ಕಾಶಿನಾಥ ತಳಕೇರಿ, ಅಭಿಷೇಕ ಚಕ್ರವರ್ತಿ ಮಾತನಾಡಿದರು.

ದೇವೂರ ಹಿರೇಮಠದ ಮರುಳಾರಾಧ್ಯ ಶಿವಾಚಾರ್ಯರು, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಜ ಯಲಿಗಾರ, ಪಟ್ಟಣ ಪಂಚಾಯಿತಿ ಸದಸ್ಯರಾದ ಶಾಂತಯ್ಯ ಜಡಿಮಠ, ಬಶೀರ ಅಹಮ್ಮದ ಬೇಪಾರಿ, ಪ್ರಕಾಶ ಮಲ್ಹಾರಿ, ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಸ್.ಬೇವನೂರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ಪಿ.ಎಸ್.ಮಿಂಚನಾಳ, ಎ.ಎಚ್.ವಾಲೀಕಾರ ಉಪಸ್ಥಿತರಿದ್ದರು. ರಾಜಶೇಖರ ಕುಂಬಾರ ಸ್ವಾಗತಿಸಿದರು. ಎ.ಎ.ಕರಿಕಬ್ಬಿ ವಂದಿಸಿದರು. ಸಾಹೇಬಗೌಡ ಬಿರಾದಾರ ನಿರೂಪಿಸಿದರು.

ಸರ್ವಾಧ್ಯಕ್ಷರ ಮೆರವಣಿಗೆ: ಸಾಹಿತ್ಯ ಸಮ್ಮೇಳನಕ್ಕೂ ಮುಂಚೆ ಹೊಸನಗರದ ಟಿಪ್ಪು ಸುಲ್ತಾನ ವೃತ್ತದಿಂದ ಸಮ್ಮೇಳನದ ವೇದಿಕೆಯವರೆಗೆ ಸಾರೋಟದಲ್ಲಿ ಸರ್ವಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಿದ್ಧೇಶ್ವರ ಸ್ವಾಮೀಜಿ ಪ್ರೌಢಶಾಲೆಯ ಮಕ್ಕಳು ಶರಣರ, ಸಾಹಿತಿಗಳ ವೇ ಧರಿಸಿ ಪಾಲ್ಗೊಂಡಿದ್ದರು. ಡೊಳ್ಳು ಕುಣಿತ, ಹಲಗೆ ಮೇಳ, ಬೊಂಬೆಗಳು ಮೆರವಣಿಗೆಗೆ ಮೆರಗು ತಂದುಕೊಟ್ಟವು.

ಸಮ್ಮೇಳನಕ್ಕೆ ವಿರೋಧ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆ, ಕನ್ನಡ ಸಾಹಿತ್ಯ ಗೊತ್ತಿಲ್ಲದವರನ್ನು ಸನ್ಮಾನಿಸಿದ ಆಯೋಜಕರ ಕ್ರಮಕ್ಕೆ ವಿರೋಧ ವ್ಯಕ್ತವಾಯಿತು. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಡೊಳ್ಳಿನ ಪದ, ಯೋಗ, ಪ್ರಗತಿಪರ ರೈತರು ಹಾಗೂ ಜಾನಪದ ಕಲಾವಿದರು, ಸಾಕಷ್ಟು ಪ್ರತಿಭಾವಂತರು ಇದ್ದರೂ ಅವರನ್ನು ಲೆಕ್ಕಿಸದೆ ಯಾವ ಮಾನದಂಡದ ಮೇಲೆ ಸಾಧಕರನ್ನು ಆಯ್ಕೆ ಮಾಡಿಕೊಡಿದ್ದಾರೆ ಎಂದು ತಾಲೂಕಿನ ಬುದ್ಧಿಜೀವಿಗಳು, ಚಿಂತಕರು ಆಕ್ರೋಶ ವ್ಯಕ್ತಪಡಿಸಿದರು. ಆಯೋಜಕರ ಕ್ರಮಕ್ಕೆ ಟಿಪ್ಪು ಕ್ರಾಂತಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ದಸ್ತಗೀರ ಮುಲ್ಲಾ, ಎಸ್.ಎಸ್.ಕೊಣ್ಣೂರ, ಡಾ. ಬಿ ಎಂ ಪಾಟೀಲ, ಬಿ ಬಿ ಚೌಧರಿ, ಪ್ರವೀಣ ಹುಗ್ಗಿ, ಈರಣ್ಣ ಅಂಗಡಿ ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net