ಕಾವ್ಯದ ಜೀವಂತಿಕೆಯೊಂದಿಗೆ ಜನರನ್ನು ತಲುಪಿ,  ಕವಿಗಳಿಗೆ ಸಾಹಿತಿ ಮಹಾಂತಪ್ಪ ನಂದೂರು ಸಲಹೆ,  ಸಂಗಮಸಿರಿ ಪ್ರಶಸ್ತಿ ಪ್ರದಾನ

IMG_20241208_193620_96.jpg
Published on

ಹುಬ್ಬಳ್ಳಿ: ಇಂದಿನ ಸಮಾಜದಲ್ಲಿ ಜಾತಿ, ಧರ್ಮ, ಆಚರಣೆಗಳೆಂಬ ಅಮೂರ್ತಗಳು ನಮ್ಮನ್ನು ಆಳ್ವಿಕೆ ಮಾಡುತ್ತಿದ್ದು, ಇವುಗಳೇ ಬದುಕಿನ ಬಂಡಿ ಮುಂದಕ್ಕೆ ಕೊಂಡೊಯ್ಯುತ್ತಿವೆ. ಕವಿ ಹೃದಯಗಳು ಇಂತಹ ವಿಷಯಗಳ ಮೇಲೆ ಬೆಳಕು ಚೆಲ್ಲಿದಾಗ ಅವರ ಕಾವ್ಯ ಜನರಿಗೆ ತಲುಪುತ್ತವೆ ಎಂದು ಸಾಹಿತಿ ಮಹಾಂತಪ್ಪ ನಂದೂರ ಹೇಳಿದರು.

ಇಲ್ಲಿಯ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ, ಬ್ರೈಟ್ ಬಿಜಿನೆಸ್ ಸ್ಕೂಲ್ ಸಹಯೋಗದಲ್ಲಿ ಗೋಕುಲ ರಸ್ತೆಯಲ್ಲಿರುವ ಬ್ರೈಟ್ ಬಿಜಿನೆಸ್ ಸ್ಕೂಲ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ "ಸಂಗಮ ಸಿರಿ' ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಗೆ ಆಯ್ಕೆಯಾದ "ಗಾಳಿಯ ಎದೆ ಸೀಳಿ ಹೊರಟ ಹಕ್ಕಿ' ಕೃತಿಯ ಕುರಿತು ಅವರು ಮಾತನಾಡಿದರು.

ಕಾವ್ಯವು ಮೊದಲು ಓದುಗನಿಗೆ ತಟ್ಟುತ್ತದೆ, ನಂತರದಲ್ಲಿ ಅದು ಅರ್ಥವಾಗುತ್ತದೆ. ಸುಂದರ ಕವಿತೆಯು ಮನ, ಹೃದಯ, ತಲ ಸ್ಪರ್ಶಿಯಾಗಿ ಮನುಷ್ಯನಿಗೆ ಸಂಸ್ಕಾರ ಕೊಡುತ್ತದೆ. ಕವಿಯಾದವರು ಅಮೂರ್ತವನ್ನು ಮೂರ್ತಗೊಳಿಸಿ ಅದಕ್ಕೆ ಕಾವ್ಯ ರೂಪ ಕೊಡಬೇಕು ಎಂದರು.

ನೋವನ್ನು ಕಾವ್ಯವಾಗಿಸುವುದು ಸವಾಲಿನ ಕೆಲಸವಾಗಿದೆ. ಅದನ್ನು ಜಾಗ್ರತೆಯಿಂದ ಕವಿ ಮಾಡಿದಾಗ ಅದುವೇ ಕಾವ್ಯವಾಗುತ್ತದೆ. ಪ್ರಶಸ್ತಿಗೆ ಸುಮಾರು 86 ಕೃತಿಗಳು ಬಂದಿದ್ದವು. ಅದರಲ್ಲಿ ಕೇವಲ 15- 20ರಷ್ಟು ಉತ್ತಮವಾಗಿದ್ದವು. ಬರೆಯುವ ಕಾವ್ಯದ ಸಾಲುಗಳು ಉಸಿರಾಡಬೇಕು. ಜೀವಂತಿಕೆ ಪ್ರದರ್ಶಿಸಬೇಕು. ಕನ್ನಡ ಕಾವ್ಯ ಪರಂಪರೆ ಶ್ರೀಮಂತವಾಗಿದೆ. ಅದನ್ನು ಓದಿ ತಿಳಿದುಕೊಳ್ಳುವ ಮೂಲಕ ಉತ್ತಮ ಸಾಹಿತ್ಯ ರಚನೆ ಮಾಡಬೇಕು ಎಂದು ಸಲಹೆ ನೀಡಿದರು.

ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ ಮಾತನಾಡಿ, ನಡೆನುಡಿ ಒಂದಾಗಿ ಶುದ್ಧ ಬದುಕು ನಡೆಸಿದ ಡಾ. ಸಂಗಮೇಶ ಹಂಡಿಗಿ ಅವರು ಶರಣರ ಮಾರ್ಗದಲ್ಲಿ ನಡೆದವರು. ಅವರು ಬದುಕನ್ನು ಕಾವ್ಯ, ಸಾಹಿತ್ಯದ ಪ್ರಕಾರಗಳಲ್ಲಿ ಸವೆಸಿದವರು. ಸುಮಾರು 46 ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಟ್ಟಿದ್ದಾರೆ. ನಡೆದಾಡುವ ವಚನ ವಿಶ್ವವಿದ್ಯಾಲಯ ಎಂದೇ ಖ್ಯಾತರಾದವರು. ಅವರ ಸ್ಮರಣೆಗಾಗಿ ಇದೀಗ ಮೂರನೇ ವರ್ಷದ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ತುಮಕೂರು ಜಿಲ್ಲೆ ತಿಪಟೂರ ತಾಲೂಕಿನ ಶಿವರ ಗ್ರಾಮದ ಡಾ. ಎಸ್.ಕೆ. ಮಂಜುನಾಥ ಅವರಿಗೆ ಸಂಗಮಸಿರಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ಶ್ರೀ ಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರತಿಷ್ಠಾನದ ಅಧ್ಯಕ್ಷ ಜಿ.ಬಿ. ಗೌಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು.

ಸಾಧಕರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಐ.ಎಂ. ವಲ್ಲೆಪ್ಪನವರ, ಡಾ. ರಾಮು ಮೂಲಗಿ, ಜೆ.ಜಿ. ಸಂಸ್ಥಾನಮಠ, ಗೋಪಾಲ ಮನುವಾಚಾರ್ಯ, ಸ್ತುತಿ ಕುಲಕರ್ಣಿ ಅವರಿಗೆ ಗೌರವಿಸಲಾಯಿತು.

ಬ್ರೈಟ್ ಸ್ಕೂಲ್ ನ ಕಾರ್ಯದರ್ಶಿ ಬಿ.ಎಲ್. ಲಿಂಗಶೆಟ್ಟರ, ಎಸ್.ವಿ. ಪಟ್ಟಣಶೆಟ್ಟಿ, ಆರ್.ಎಂ. ಗೋಗೇರಿ, ಈರಣ್ಣ, ಸಿದ್ದನಗೌಡ ಬಿಜ್ಜೂರು, ಇತರರು ಇದ್ದರು.

ಸೋಮು ರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ವಿರೇಶ ಹಂಡಿಗಿ ಸ್ವಾಗತಿಸಿದರು. ಸಹಕಾರ್ಯದರ್ಶಿಗಳಾದ ಡಾ. ಬಿ.ಎಸ್. ಮಾಳವಾಡ ಪರಿಚಯಿಸಿದರು. ರವೀಂದ್ರ ರಾಮದುರ್ಗಕರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net