‘ಸಂಗಮ ‘ಕಾದಂಬರಿ ಬಿಡುಗಡೆ

ssssssssss
Published on




ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಇದರ ವತಿಯಿಂದ ಡಾ.ಎಚ್.ಆರ್.ವಿಶ್ವಾಸ ಅವರ ‘ಸಂಗಮ ‘ಕಾದಂಬರಿಯ ಬಿಡುಗಡೆ ಹಾಗೂ ಅಭಾಸಾಪ ಮಂಗಳೂರು ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ ಘೋಷಣೆ
ಕಾರ್ಯಕ್ರಮ ನಗರದ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದ ಧ್ಯಾನ ಮಂದಿರ ಸಭಾಂಗಣದಲ್ಲಿ ನಡೆಯಿತು.
ಕಾದಂಬರಿ ಬಿಡುಗಡೆಗೊಳಿಸಿದ ಕರ್ಣಾಟಕ ಬ್ಯಾಂಕ್‌ನ ನಿಕಟಪೂರ್ವ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಎಂ.ಎಸ್.ಮಹಾಬಲೇಶ್ವರ ಮಾತನಾಡಿ ಸಾಹಿತ್ಯ ಓದುಗರಿಗೆ ಕುತೂಹಲದ ಜತೆಗೆ ಆನಂದ ನೀಡಬೇಕು. ಸಾಮಾಜಿಕ ಸಮಸ್ಯೆಗಳನ್ನು ತೆರೆದಿಟ್ಟು ಅದಕ್ಕೆ ಪರಿಹಾರವನ್ನು ಸೂಚಿಸಬೇಕು. ಅಂತಹ ಧನಾತ್ಮಕ ಅಂಶಗಳು ಸಂಗಮ ಕಾದಂಬರಿಯಲ್ಲಿ ಅಡಕವಾಗಿದೆ ಎಂದರು.
ಬ್ರಾಹ್ಮಣ ಸಮುದಾಯದ ಕೆಲವು ವರ್ಗ ಅನುಭವಿಸುವ ಕಷ್ಟವನ್ನು ಡಾ.ವಿಶ್ವಾಸ ಅವರು ಈ ಕಾದಂಬರಿಯಲ್ಲಿ ಮನೋಜ್ಞವಾಗಿ ವಿವರಿಸಿದ್ದಾರೆ. ವಿಷಯವನ್ನು ವೈಭವೀಕರಿಸದೆ ವಾಸ್ತವ ಅಂಶಗಳಿಗೆ ಒತ್ತು ನೀಡಿದ್ದಾರೆ ಎಂದು ಅವರು ಹೇಳಿದರು.
ಶಕ್ತಿನಗರದ ಸರ್ಕಾರಿ ಪ.ಪೂ.ಕಾಲೇಜಿನ ಕನ್ನಡ ಉಪನ್ಯಾಸಕಿ ಸುಮನಾ ನಂದೋಡಿ ಕೃತಿ ಪರಿಚಯ ನೀಡಿದರು. ಅಭಾಸಾಪ ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಕಾದಂಬರಿಕಾರ ಡಾ.ಎಚ್.ಆರ್.ವಿಶ್ವಾಸ ಉಪಸ್ಥಿತರಿದ್ದರು.
ಅಭಾಸಾಪ ರಾಜ್ಯ ಸಂಘಟನಾ ಕಾರ್ಯದರ್ಶಿ ಶೈಲೇಶ್ ಕುಲಾಲ್ ಮಂಗಳೂರು ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ ಪಟ್ಟಿ ಘೋಷಿಸಿದರು. ಮೀನಾಕ್ಷಿ ರಾಮಚಂದ್ರ ಸ್ವಾಗತಿಸಿ, ಗೀತಾ ಲಕ್ಷ್ಮೀಶ ವಂದಿಸಿದರು. ಅಭಾಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಿಮಳ ರಾವ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net