ಅಕ್ಷರ ಜಾತ್ರೆಗೆ ಸಾಣೇಹಳ್ಳಿ ಶ್ರೀ ಸಾರಥ್ಯ

KASAPA
Published on

ನಾಯಕನಹಟ್ಟಿ: ರಾಜ್ಯದಲ್ಲಿಯೇ ಹೊಸ ಪ್ರಯೋಗವಾಗಿರುವ ಚಿತ್ರದುರ್ಗ-ಚಿಕ್ಕಮಗಳೂರು ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ರಂಗಜಂಗಮ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.30, 31ರಂದು ಸಾಣೇಹಳ್ಳಿಯಲ್ಲಿ ಸಮ್ಮೇಳನ ನಡೆಸಲು ಸಕಲ ಸಿದ್ಧತೆ ಕೈಗೊಂಡಿದ್ದು, ಎರಡು ಜಿಲ್ಲೆಗಳ ಕಸಾಪ ಪದಾಧಿಕಾರಿಗಳ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ವೈಚಾರಿಕ ಲೇಖಕ, ನಾಟಕ, ರಂಗ ಸಂಘಟಕರಾಗಿ ರಾಜ್ಯದಲ್ಲಿ ಮನೆಮಾತಾಗಿದ್ದಾರೆ. ಅವರ ನಾಟಕ ಚಟುವಟಿಕೆಗಳು ರಾಜ್ಯ, ದೇಶದ ಗಡಿಗಳನ್ನು ಮೀರಿವೆ. ಸಾಣೇಹಳ್ಳಿ ಪುಟ್ಟ ಗ್ರಾಮವನ್ನು ತಮ್ಮ ರಂಗ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಅವರ ಕೃತಿಗಳು, ಸಾಹಿತ್ಯ, ರಂಗಚಟುವಟಿಕೆಗಳಿಗೆ ಗೌರವ ಸಲ್ಲಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲೆಯ ತಳಕು ಮತ್ತು ಬೆಳಗೆರೆ ಸಾಹಿತ್ಯಕ್ಕೆ ಹೆಸರು ಪಡೆದರೆ, ಸಾಣೆಹಳ್ಳಿ ಗ್ರಾಮವು ರಂಗಭೂಮಿ ಚಟುವಟಿಕೆಗೆ ರಾಜ್ಯ ಮತ್ತು ದೇಶದಲ್ಲಿ ಗಮನ ಸೆಳೆದಿದೆ. ಇದರ ಹಿಂದಿನ ಪೂರ್ಣ ಪ್ರಯತ್ನ ಶ್ರೀಗಳದ್ದಾಗಿದೆ. ಇವರ ಸಾಹಿತ್ಯ, ರಂಗಭೂಮಿ, ವಚನ ಸಾಹಿತ್ಯ ಪ್ರಸಾರ, ಶಿಕ್ಷಣ, ದಾಸೋಹ ಇತರ ಕೊಡುಗೆಗಳನ್ನು ಸ್ಮರಿಸಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಘೋಷಿಸಿದೆ ಎಂದರು.

ಶ್ರೀಗಳ ಪರಿಚಯ: ಆರು ನಾಟಕ, 1 ಪ್ರವಾಸ ಕಥನ, ಎರಡು ವಚನ ಸೇರಿ ಐವತಕ್ಕೂ ಹೆಚ್ಚು ವೈಚಾರಿಕ ಕೃತಿಗಳನ್ನು ರಚಿಸಿದ್ದಾರೆ. 2004ರಲ್ಲಿ ಹೊಸದುರ್ಗದಲ್ಲಿ ಆಯೋಜಿಸಿದ್ದ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ರಾಜ್ಯ, ರಾಷ್ಟ್ರಮಟ್ಟದ ಅನೇಕ ಪ್ರಶಸ್ತಿ, ಗೌರವಗಳಿಗೆ ಶ್ರೀಗಳು ಪಾತ್ರರಾಗಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಶಿವಮ್ಮ-ನಾಗಯ್ಯ ದಂಪತಿ ಪುತ್ರನಾಗಿ ಸೆಪ್ಟೆಂಬರ್ 4, 1951ರಲ್ಲಿ ಜನಿಸಿದರು. ಗ್ರಾಮದಲ್ಲಿ ಪ್ರಾಥಮಿಕ, ಸುಣಕಲ್ಲು ಬಿದರಿಯಲ್ಲಿ ಪ್ರೌಢ, ಸಿರಿಗೆರೆ ಕಾಲೇಜು ಶಿಕ್ಷಣ ಪಡೆದರು. ಮೈಸೂರು ವಿವಿಯಿಂದ 1974ರಲ್ಲಿ ತತ್ವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ರ‌್ಯಾಂಕ್ (ಚಿನ್ನದ ಪದಕ) ಪಡೆದರು. ಡಿ.25, 1977ರಂದು ಸಾಣೇಹಳ್ಳಿಯ ಪೀಠಾಧ್ಯಕ್ಷರಾಗಿ ನೇಮಕಗೊಂಡರು.

ಪ್ರಧಾನಿಗಳ ಮೆಚ್ಚುಗೆ: ವಚನ ಸಂಸ್ಕೃತಿ ಅಭಿಯಾನದ ಅಂಗವಾಗಿ 44 ವಚನಗಳನ್ನು ಆಧರಿಸಿದ ನೀನಲ್ಲದೆ ಮತ್ತಾರೂ ಇಲ್ಲವಯ್ಯ (ತುಮ್ಹಾರೆ ಸಿವಾ ಔರ್ ಕೋಯಿ ನಹಿ) ನೃತ್ಯ ರೂಪಕ ರಾಜ್ಯ ಮತ್ತು ದೇಶದೆಲ್ಲೆಡೆ ಪ್ರದರ್ಶನಗೊಂಡಿದೆ. ಪಂಡಿತಾರಾಧ್ಯ ಶ್ರೀಗಳು ಧ್ವನಿ ನೀಡಿ ವಚನಗೀತೆಗಳನ್ನು ಅಳವಡಿಸಿದ ಗೀತ ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಗೀತ ನಾಟಕವು ದೇಶದ 14 ರಾಜ್ಯಗಳಲ್ಲಿ 11 ಸಾವಿರ ಕಿ.ಮೀ. ಕ್ರಮಿಸಿ ವಚನಗಳ ಸಂದೇಶವನ್ನು ಸುಮಧುರ ಗೀತೆ, ನೃತ್ಯಗಳ ಮೂಲಕ ಲಕ್ಷಾಂತರ ಜನರನ್ನು ತಲುಪಿರುವುದು ದೇಶದ ಇತಿಹಾಸದಲ್ಲಿ ಮೈಲುಗಲ್ಲು ಆಗಿದೆ.

ಬಂಡಾಯಗಾರ: ಮೈಸೂರು ವಿವಿ ತತ್ವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ 1974ರಲ್ಲಿ ರ‌್ಯಾಂಕ್ ಗಳಿಸಿದ್ದ ಶ್ರೀಗಳು, ಶುಲ್ಕದ ಹಣ ನೀಡಿ ಚಿನ್ನದ ಪದಕ ಪಡೆಯಿರಿ ಎಂಬ ವಿವಿಯ ಸೂಚನೆಗೆ, ದುಡ್ಡು ಕೊಟ್ಟು ಪದಕ ಪಡೆಯುವುದಿಲ್ಲ ಎಂದು ಪ್ರತಿಭಟನೆ ಸೂಚಿಸಿದ್ದರು. ವಿದ್ಯಾರ್ಥಿ ದೆಸೆಯಿಂದಲೂ ಶ್ರೀಗಳು ನೇರ ನುಡಿ, ಬಂಡಾಯದ ಮನೋಧರ್ಮ, ಸಮಯ ಪ್ರಜ್ಞೆ, ಶಿಸ್ತು ರೂಢಿಸಿಕೊಂಡಿದ್ದರು.

ಡಾಕ್ಟರೇಟ್ ಪದ ಬಳಕೆಗೆ ವಿರೋಧ: ಗೌರವ ಡಾಕ್ಟರೇಟ್ ಈಚೆಗೆ ಮೌಲ್ಯ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಯಾವುದೇ ಆಹ್ವಾನ ಪತ್ರಿಕೆಗಳಲ್ಲಿ ತಮ್ಮ ಹೆಸರಿಗಿಂತ ಮುಂಚೆ ಡಾ. ಬಳಸದಂತೆ ಭಕ್ತರಿಗೆ ಸೂಚಿಸಿದ್ದಾರೆ. ತಮ್ಮ ಹಿರಿಯ ಗುರುಗಳು ಶ್ರೀ ಶಿವಕುಮಾರ ಸ್ವಾಮೀಜಿ ದಯಪಾಲಿಸಿದ ಸನ್ಯಾತ್ವವೇ ನನಗೆ ಎಲ್ಲ ಗೌರವಕ್ಕಿಂತಲೂ ಮಿಗಿಲು ಎಂಬುದು ಅವರ ನೇರ ಮಾತು.

ಪರಿಷತ್ತಿಗೆ ಗೌರವ: ಶ್ರೀಗಳು ಸಾಹಿತ್ಯ, ರಂಗಭೂಮಿಯಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಅವರ ಈ ಆಯ್ಕೆ ಪರಿಷತ್ತಿನ ಗೌರವ ಹೆಚ್ಚಿಸಿದೆ. ರಾಜ್ಯದಲ್ಲಿಯೇ ಅಂತರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಯೋಗ ಯಶಸ್ಸಿಗೆ ಶ್ರೀಗಳ ಸರ್ವಾಧ್ಯಕ್ಷತೆ ಹೆಚ್ಚು ಸಹಕಾರ ಆಗಲಿದೆ. ಇತರ ಜಿಲ್ಲೆಗಳಲ್ಲಿ ಸಮ್ಮೇಳನ ಆಯೋಜನೆಗೆ ಉತ್ಸಾಹ ತುಂಬಲಿದೆ.- ಸೂರಿ ಶ್ರೀನಿವಾಸ್, ಜಿಲ್ಲಾಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್, ಚಿಕ್ಕಮಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net