ಭ್ರಷ್ಟ ವ್ಯವಸ್ಥೆ ತೊಲಗಿಸಲು ಸಂಘಟನೆ ಅಗತ್ಯ

01 CHN
Published on

ಚನ್ನಗಿರಿ: ಸಮಾಜದಲ್ಲಿನ ಭ್ರಷ್ಟ ವ್ಯವಸ್ಥೆ ತೊಲಗಿಸಲು ಸಂಘಟನೆಯಿಂದ ಮಾತ್ರ ಸಾಧ್ಯ. ಅದಕ್ಕಾಗಿ 5 ಅಂಶಗಳನ್ನು ಅನುಷ್ಠಾನ ಮಾಡಲು ಪಾದಯಾತ್ರೆಯನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಾಣೇಹಳ್ಳಿ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸಂತೆಬೆನ್ನೂರಿನಲ್ಲಿ ಗುರುವಾರ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ನಮ್ಮ ನಡೆ ಸವೋದಯದೆಡೆ ಪಾದಯಾತ್ರೆಯ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಗಾಂಧಿಜಿಯವರ ತತ್ವಗಳನ್ನು ಅನುಷ್ಠಾನ ಮಾಡುವಂತೆ ಸರ್ಕಾರವನ್ನು ಸಂಘಟನೆ ಹಾಗೂ ಜಾಗೃತಿ ಮೂಲಕ ಒತ್ತಾಯಿಸಲಾಗುತ್ತದೆ. ಮೊದಲ ಪಾದಯಾತ್ರೆ ಎಲ್ಲೆಡೆ ಸಂಚಲನ ಮೂಡಿಸಿದೆ. ಎಲ್ಲರೂ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು, ಪ್ಲಾಸ್ಟಿಕ್ ನಿಷೇಧಿಸಬೇಕು, ಸಾವಯವ ಕೃಷಿಗೆ ಒತ್ತು ನೀಡಬೇಕು ಹಾಗೂ ಭ್ರಷ್ಟ ರಾಜಕೀಯ ತೊಲಗಿಸಲು ಸಂಘಟಿತರಾಗಬೇಕು ಎಂದರು.

ಜ. 27ರಂದು ಸಾಣೇಹಳ್ಳಿಯಿಂದ ಪ್ರಾರಂಭಗೊಂಡ ಪಾದಯಾತ್ರೆ ಬೇಗೂರು, ಅಜ್ಜಂಪುರ, ಬುಕ್ಕಾಂಬುದಿ, ತಾವರೆಕೆರೆ, ಪಾಂಡೋಮಟ್ಟಿ, ಚನ್ನಗಿರಿ, ದೇವರಹಳ್ಳಿ ಮೂಲಕ ಸಂತೇಬೆನ್ನೂರು ತಲುಪಿ ಸಮಾಪ್ತಿಗೊಂಡಿತು ಎಂದರು.

ಪಾಂಡೋಮಟ್ಟಿ ವಿರಕ್ತಮಠದ ಡಾ. ಶ್ರೀಗುರುಬಸವ ಸ್ವಾಮಿ ಮಾತನಾಡಿ, ಪಾದಯಾತ್ರೆ ಸಾಣೇಹಳ್ಳಿಯಿಂದ ಸಂತೆಬೆನ್ನೂರಿನ ವರೆಗಿನ ಸುಮಾರು 96 ಕಿಮೀ ದೂರವನ್ನು 4 ದಿನದಲ್ಲಿ ಮುಗಿಸಲಾಗಿದೆ. ಇದಕ್ಕೆ ಹಲವು ಮಠಾಧೀಶರು, ಚಿಂತಕರು, ಸಾಹಿತಿಗಳು, ರಾಜಕಾರಣಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡು ಬೆಂಬಲ ಸೂಚಿಸಿದ್ದಾರೆ ಎಂದರು.

ಚಾಮರಾಜನಗರದ ಜಯದೇವ್ ಮಾತನಾಡಿ, ಸರ್ಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೆ ತಲುಪಿದಾಗ ಮಾತ್ರ ಯೋಜನೆ ಯಶಸ್ವಿಯಾಗುತ್ತದೆ ಎಂದು ಗಾಂಧೀಜಿ ಹೇಳಿದ್ದಾರೆ. ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು. ಅಲ್ಲದೆ ಉತ್ತಮ ಗ್ರಹಿಕೆ ಮಾತೃ ಭಾಷೆಯಿಂದ ಮಾತ್ರ ದೊರೆಯುತ್ತದೆ ಎಂದರು.

ಬೆಂಗಳೂರಿನ ಸರಸ್ವತಿ ಚುಕ್ಕಿ ಮಾತನಾಡಿ, ರಾಸಾಯನಿಕಯುಕ್ತ ಆಹಾರ ಪದ್ಧತಿ ಹೊಸ ರೂಪವನ್ನು ಪಡೆದಿದೆ. ಮಹಿಳೆಯ ಅಡುಗೆ ಕೌಶಲಕ್ಕೆ ಮಾನ್ಯತೆ ನೀಡಬೇಕು. ಅಡುಗೆಗೆ ವಿಜ್ಞಾನ, ಸಂಸ್ಕೃತಿ, ಪರಂಪರೆ ಹಾಗೂ ವೈಚಾರಿಕತೆ ಇದೆ ಮತ್ತು ತಾಯಿಗೆ ಗುರುಸ್ಥಾನ ನೀಡಬೇಕಿದೆ ಎಂದರು.

ಮುಖ್ಯಮಂತ್ರಿ ಸಲಹೆಗಾರ ಹಾಗೂ ಶಾಸಕ ಬಿ.ಆರ್. ಪಾಟೀಲ್, ಓಂಕಾರೇಶ್ವರ ಸ್ವಾಮೀಜಿ, ಯಳನಾಡು ಶ್ರೀಜ್ಞಾನ ಪ್ರಭುಸಿದ್ದರಾಮ ಸ್ವಾಮೀಜಿ, ಮಾಜಿ ಶಾಸಕ ಮಾಹಿಮಾ ಜೆ. ಪಟೇಲ್, ಮಾಡಾಳು ವಿರೂಪಾಕ್ಷಪ್ಪ, ತೇಜಸ್ವಿ ಪಟೇಲ್, ವಡ್ನಾಳ್ ಜಗದೀಶ್, ಆರ್.ಜಿ. ಹಳ್ಳಿ ನಾಗರಾಜ್, ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ಮೀನಾಕ್ಷಮ್ಮ, ಕೆ. ಸಿದ್ದಲಿಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net