ಶ್ರೀಗಳಿಂದ ಸಿರಿಗೆರೆಗೆ ಅಂತಾರಾಷ್ಟ್ರೀಯ ಸ್ಥಾನಮಾನ

dj hsd sanehalli..
Published on

ಹೊಸದುರ್ಗ: ಸಿರಿಗೆರೆಯಂತಹ ಪುಟ್ಟ ಹಳ್ಳಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ ಕೀರ್ತಿ ಲಿಂಗೈಕ್ಯ ಶಿವಕುಮಾರ ಶ್ರೀಗಳಿಗೆ ಸಲ್ಲುತ್ತದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ತರಳಬಾಳು ಶಾಖ ಮಠದಲ್ಲಿ ಭಾನುವಾರ ಲಿಂ.ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿ,

ದುಗ್ಗಾಣಿ ಮಠ ಎಂದು ಕರೆಯುತ್ತಿದ್ದ ಸಿರಿಗೆರೆಯ ಮಠವನ್ನು ಶಿವಕುಮಾರ ಶ್ರೀಗಳು ಹಗಲು ರಾತ್ರಿ ಶ್ರಮಿಸಿ, ಹೋರಾಟ ನಡೆಸಿ ದುಡಿಯುವ ಮಠವಾಗಿಸಿದರು ಎಂದರು.

ಜಾತಿ, ಮತ, ಪಕ್ಷ, ಪಂಗಡ ಎನ್ನದೆ ಎಲ್ಲರನ್ನು ನಮ್ಮವರು ಎಂದು ಭಾವಿಸಿ ಜಾತಿ ಎಂಬ ಭೂತವನ್ನು ತೊಡೆದು ಹಾಕಿದರು.

ವಿಶ್ವಬಂಧು ಮರಳಸಿದ್ದರು ಮಾದಿಗ ಜನಾಂಗದಲ್ಲಿ ಜನಿಸಿ ತಮ್ಮ ಸಾಧನೆಯ ಮೂಲಕ ವಿಶ್ವಬಂಧುತ್ವ ಬೆಳೆಸಿದವರು. ಆ ಪರಂಪರೆಯನ್ನು ಲಿಂಗೈಕ್ಯ ಹಿರಿಯ ಜಗದ್ಗುರುಗಳು ಮುಂದುವರಿಸಿದರು ಎಂದರು.

ಕೇವಲ 40 ವರ್ಷಗಳ ಅವಧಿಯಲ್ಲಿ ಅದ್ಭುತವಾದ ಸಾಧನೆ ಮಾಡಿದರೂ ಕೂಡ ನಮ್ಮ ನಂತರ ನನಗಿಂತ ಶ್ರೇಷ್ಠರು ಈ ಸಮಾಜಕ್ಕೆ ಬರಬೇಕೆಂದು ಎನ್ನುವ ಉದ್ದೇಶದಿಂದ ತ್ಯಾಗ ಪತ್ರವನ್ನು ಸಮಾಜಕ್ಕೆ ಕೊಟ್ಟು ತಮ್ಮ 60ನೇ ವಯಸ್ಸಿನಲ್ಲಿ ನಿವೃತ್ತಿಯನ್ನು ಘೋಷಿಸಿದರು.

ಅಂತಹ ಪರಂಪರೆಯನ್ನು ಮಠ-ಪೀಠಗಳಲ್ಲಿ ಹಾಗೂ ರಾಜಕೀಯದ ಇತಿಹಾಸದಲ್ಲಿ ಕಾಣಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಡಾ.ಜಿ.ಎಸ್.ಚಂದ್ರಶೇಖರ್ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಉಚಿತ ವಸತಿ ನಿಲಯ ಮತ್ತು ಶಾಲೆಗಳನ್ನು ತೆರೆದು ಜಾತಿ ಭೇದವಿಲ್ಲದೆ ಶಿಕ್ಷಣವನ್ನು ನೀಡಿದ ಮಠಗಳಲ್ಲಿ ತರಳಬಾಳು ಮಠ ಪ್ರಮುಖವಾದದ್ದು.

ಇಂತಹ ವಿದ್ಯಾದಾನ ಮಾಡಿದ ಮಠಕ್ಕೆ ಎಲ್ಲರೂ ಕೃತಜ್ಞರಾಗಿರಬೇಕು. ಆರೋಗ್ಯಯುತ ಜೀವನ ನಡೆಸಲು ಮನುಷ್ಯ ದುಶ್ಚಟಗಳಿಂದ ದೂರವಿರಬೇಕು ಎಂದರು.

ನಾಗರಾಜ್ ವಚನ ಗೀತೆಗಳನ್ನು ಹಾಡಿದರು. ಸ್ಥಳಿಯ ಶಾಲಾ ಸಿಬ್ಬಂದಿ, ವಿಧ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಉಚಿತ ಆರೋಗ್ಯ ತಪಾಸಣಾ ಶಿಬಿರ: ಸಾಣೇಹಳ್ಳಿಯ ತರಳಬಾಳು ಶಾಖ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಲಿಂ.ಶ್ರೀ ಶಿವಕುಮಾರ ಶಿವಾಚಾರ್ಯ

ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ ಉಡುಪಿಯ ಆದರ್ಶ ಆಸ್ಪತ್ರೆಯ ಡಾ.ಜಿ.ಎಸ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net