

ಹೊಸದುರ್ಗ: ರಾಜ್ಯ ಸರ್ಕಾರ ಪ್ರಸ್ತಾವಿತ ಸಾವಿರ ಮದ್ಯದಂಗಡಿಯ ಯೋಜನೆಯನ್ನು ಕೈಬಿಟ್ಟು ಜನರ ಆರ್ಥಿಕ, ನೈತಿಕ ಮೌಲ್ಯ ಹಾಗೂ ಆರೋಗ್ಯ ಭಾಗ್ಯ ಕರುಣಿಸುವ ಹೃದಯವಂತಿಕೆ ಮೆರೆಯಲಿ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಣೇಹಳ್ಳಿಯ ತರಳಬಾಳು ಶಾಖಾ ಮಠದಲ್ಲಿ ಸೋಮವಾರ ಮಾತನಾಡಿ, ಇಂದಿನ ಪತ್ರಿಕೆಗಳಲ್ಲಿ ಅಬಕಾರಿ ಇಲಾಖೆ ಮತ್ತು ಮಂತ್ರಿಗಳ ಹೊಸ ಅಜೆಂಡಾ ನೋಡಿ ತುಂಬಾ ವೇದನೆಯಾಯಿತು.
ಇವರಿಗೆ ಯಾರು ಬುದ್ಧಿ ಹೇಳಬೇಕು ಎನ್ನುವುದೇ ತಿಳಿಯದಾಗಿದೆ ಎಂದು ಬೇಸರಿಸಿದರು.
ಕರ್ನಾಟಕವನ್ನು ಕಡುಕರ ರಾಜ್ಯವನ್ನಾಗಿಸಿ ತಮ್ಮ ಅಧಿಕಾರವನ್ನು ಸ್ಥಿರಗೊಳಿಸಿಕೊಳ್ಳುವ ಸಂಚು ಇದರ ಹಿಂದಿದೆಯೇ ಎಂದು ಪ್ರಶ್ನಿಸಿದ ಅವರು ಈಗಾಗಲೇ ಕುಡಿತದಿಂದ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.
ಜನಪ್ರತಿನಿಧಿಗಳು ಇದನ್ನು ಗಮನಿಸದಿರುವುದು ನಿಜಕ್ಕೂ ವಿಷಾದನೀಯ ಎಂದರು.
ಕ್ಷಣಿಕ ಲಾಭಕ್ಕಾಗಿ ಎಲ್ಲ ಆದರ್ಶಗಳನ್ನು ಗಾಳಿಗೆ ತೂರುವ ನೇತಾರರು ಬುದ್ಧ, ಬಸವಣ್ಣ, ಟಿಪ್ಪು, ಗಾಂಧಿ ಮತ್ತಿತರ ದಾರ್ಶನಿಕರ ಚಿಂತನೆಗಳನ್ನು ಜಾರಿಗೆ ತರುವುದು ಯಾವಾಗ.
ಮದ್ಯದ ದುಷ್ಪರಿಣಾಮ ಅನುಭವಿಸುತ್ತಿರುವ ಕುಟುಂಬದವರು ಮೌನವಹಿಸದೆ ಈಗಲಾದರೂ ಸರ್ಕಾರದ ಧೋರಣೆ ವಿರುದ್ಧ ಬಂಡಾಯ ಏಳುವ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದರು.
ಪ್ರವಾಹದ ವಿರುದ್ಧ ಈಜುವುದು ಸುಲಭವಲ್ಲವೆಂದು ನಮಗೂ ಗೊತ್ತು. ಹಾಗಂತ ಸರ್ಕಾರದ ನೀತಿಯನ್ನು ಅದನ್ನು ಸ್ವಾಗತಿಸಬೇಕು ಎಂದಲ್ಲ. ದೊಡ್ಡ ಅನಾಹುತ ಸಂಭವಿಸುವ ಮೊದಲೇ ಸರ್ಕಾರ ಎಚ್ಚೆತ್ತು ಸಾವಿರ ಮದ್ಯದಂಗಡಿಯ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.