ಎಲ್ಲೆಂದರಲ್ಲಿ ಕಸ ಹಾಕಿದರೆ ದಂಡ ವಿಧಿಸಿ: ಬಳ್ಳಾರಿ ಜಿಪಂ ಯೋಜನಾ ನಿರ್ದೇಶಕ ಜಾನಕಿರಾಮ್ ಸೂಚನೆ

1908 Sanduru TP Meeting
ಸಂಡೂರು ತಾಪಂ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ದ್ರವತ್ಯಾಜ್ಯ ವಿಲೇವಾರಿ ಕುರಿತ ತರಬೇತಿ ಶಿಬಿರದಲ್ಲಿ ವಿವಿಧ ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಭಾಗವಹಿಸಿದ್ದರು.
Published on

ಸಂಡೂರು: ಬಯಲು ಶೌಚಕ್ಕೆ ಹೋಗುವವರು ಹಾಗೂ ಎಲ್ಲೆಂದರಲ್ಲಿ ಕಸ ಹಾಕುವವರಿಗೆ ಮುಲಾಜಿಲ್ಲದೆ ದಂಡ ವಿಧಿಸುವಂತೆ ಪಿಡಿಒಗಳಿಗೆ ಜಿಪಂ ಯೋಜನಾ ನಿರ್ದೇಶಕ ಜಾನಕಿರಾಮ್ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಸ್ವಚ್ಛ ಭಾರತ ಮಿಷನ್‌ನಡಿ ದ್ರವತ್ಯಾಜ್ಯ ವಿಲೇವಾರಿ ಕುರಿತು ಗ್ರಾಪಂ ಅಧ್ಯಕ್ಷರು, ಪಿಡಿಒಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ಬುಧವಾರ ಮಾತನಾಡಿದರು. 2025ರೊಳಗೆ ಗ್ರಾಮಗಳನ್ನು ತ್ಯಾಜ್ಯಮುಕ್ತ ಮಾಡಬೇಕಿದ್ದು ಜಿಲ್ಲೆಯಲ್ಲಿ ಈಗಾಗಲೇ ಘನತ್ಯಾಜ್ಯ ವಿಲೇವಾರಿ ಘಟಕಗಳು ಆರಂಭವಾಗಿದ್ದು, ಇದೀಗ ದ್ರವತ್ಯಾಜ್ಯ ವಿಲೇವಾರಿಗೆ ನರೇಗಾದಡಿ ಕ್ರಿಯಾ ಯೋಜನೆ ಸಿದ್ಧಪಡಿಸಬೇಕಿದೆ. ಅಗತ್ಯವೆನಿಸಿದರೆ ಜಿಲ್ಲಾ ಖನಿಜ ನಿಧಿ ಹಣ ಬಳಸಲಾಗುವುದು. ಶೌಚಗೃಹಗಳ ಮಹತ್ವ, ನಿರ್ಮಾಣದ ಜತೆಗೆ ಬಳಕೆ ಕುರಿತು ಜನರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ತಾಪಂ ಪ್ರೊಬೇಷನರಿ ಇಒ ಪಿ.ವಿವೇಕಾನಂದ ಮಾತನಾಡಿ, ಬಯಲು ಬಹಿರ್ದೆಸೆ, ಬಚ್ಚಲು ನೀರನ್ನು ರಸ್ತೆಗೆ ಹರಿಸುವುದರಿಂದ ಸೊಳ್ಳೆಗಳು ಅಧಿಕವಾಗಿ ರೋಗಗಳು ಹರಡುತ್ತವೆ. ಬಚ್ಚಲು ಗುಂಡಿ ನಿರ್ಮಾಣಕ್ಕೆ ಜಾಗದ ಕೊರತೆಯಿದ್ದಲ್ಲಿ ಪೈಪ್ ಮೂಲಕ ಊರಿನ ಹೊರವಲಯದಲ್ಲಿ ನಿರ್ಮಿಸಲಾದ ಟ್ರೀಟ್‌ಮೆಂಟ್ ಪ್ಲಾಂಟ್‌ಗೆ ಸಾಗಿಸಿ ಶುದ್ಧೀಕರಿಸಿ ಕೆರೆಗಳಿಗೆ ಬಿಡಲಾಗುವುದು. ಇದರಿಂದ ಆ ನೀರಿನ ಮರು ಬಳಕೆ ಹಾಗೂ ಅಂತರ್ಜಲವೂ ವೃದ್ಧಿಯಾಗಲಿದೆ. ಈ ಬಗ್ಗೆ ಗ್ರಾಪಂ ಸಿಬ್ಬಂದಿ, ಸದಸ್ಯರು, ಹಳ್ಳಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಯೋಜನೆಯ ಸಮಾಲೋಚಕರಾದ ಪ್ರಿಯಾಂಕ, ರಾಥೋಡ್, ಮಹಾಂತೇಶ ಮಾತನಾಡಿದರು. ಆರ್‌ಡಬ್ಲುೃಎಸ್ ಎಇಇ ಎಂ.ಎನ್.ವಿನಾಯಕ, ಪಿಆರ್‌ಇಡಿ ಪ್ರಭಾರ ಎಇಇ ಅನಿಲ್ ಕುಮಾರ್, ತಾಪಂ ಪ್ರಭಾರ ವ್ಯವಸ್ಥಾಪಕ ಲೋಕೇಶಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net