

ಸಂಡೂರು: ವಿಧಾನಸಭಾ ಚುನಾವಣೆ ವೇಳೆ ಮತದಾನ ಪ್ರಮಾಣ ಹೆಚ್ಚಳವಾಗುವಲ್ಲಿ ಬಿಎಲ್‌ಒಗಳ ಪಾತ್ರ ಪ್ರಮುಖವಾಗಿದೆ ಎಂದು ಸಂಡೂರು ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಶರಣಬಸವರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಭವನದಲ್ಲಿ ಸೋಮವಾರ ಆಯೋಜಿಸಿದ್ದ ಬಿಎಲ್‌ಒಗಳ ಸಭೆಯಲ್ಲಿ ಮಾತನಾಡಿದರು. 80 ವರ್ಷ ಮೇಲ್ಪಟ್ಟವರು, ಅಂಗವಿಕಲರು ಕಡ್ಡಾಯವಾಗಿ ಮತ ಚಲಾಯಿಸುವಂತೆ ನೋಡಿಕೊಳ್ಳಬೇಕು. ಮತಗಟ್ಟೆಗೆ ಬರಲು ಆಗದವರು ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸುವಂತೆ ಕ್ರಮವಹಿಸಬೇಕು. ತಾಲೂಕಿನಲ್ಲಿ ಒಟ್ಟು 249 ಬಿಎಲ್‌ಒಗಳಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಪ್ರಕ್ರಿಯೆಯಲ್ಲಿ ಲೋಪವಾಗದಂತೆ ದಾಖಲೆಗಳನ್ನು ನಿರ್ವಹಿಸಬೇಕು ಎಂದರು.
ತಾಪಂ ಇಒ ಎಚ್.ಷಡಕ್ಷರಯ್ಯ ಮಾತನಾಡಿ, ಸೆಕ್ಟ್ರಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಬಿಎಲ್‌ಒಗಳ ಸಹಕಾರದೊಂದಿಗೆ ಉತ್ತಮವಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಬಿಇಒ ಮೈಲೇಶ್ ಬೇವೂರ್, ಉಪತಹಸಿಲ್ದಾರ್ ಕೆ.ಎಂ. ಶಿವಕುಮಾರ್, ಚುನಾವಣಾ ಸಂಪನ್ಮೂಲ ವ್ಯಕ್ತಿಗಳಾದ ಪ್ರಭುರಾಜ್, ಜಿ.ಎಂ.ಪ್ರದೀಪ್ ಕುಮಾರ್, ಸೆಕ್ಟ್ರಲ್ ಅಧಿಕಾರಿಗಳು, ಬಿಎಲ್‌ಒಗಳು ಇದ್ದರು.