

ಸಂಡೂರು: ಅಸಾಂಕ್ರಾಮಿಕ ರೋಗಗಳನ್ನು ಪತ್ತೆಹಚಚಲು ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಗ್ರಾಮಪಂಚಾಯಿತಿ ಸದಸ್ಯ ರಾಮಯ್ಯ ಹೇಳಿದರು.
ತಾಲೂಕಿನ ಡಿ.ಅಂತಾಪುರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅರೋಗ್ಯವಂತ ಗ್ರಾಪಂ ನಿರ್ಮಾಣ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರದ ಆದೇಶದಂತೆ ರೋಗಗಳನ್ನು ಪತ್ತೆ ಹಚ್ಚಲು ತಪಾಸಣಾ ಶಿಬಿರಗಳನ್ನು ಆಯೋಜಿಸಲು ಅಧ್ಯಕ್ಷರು, ಪಿಡಿಒ ಅವರ ಸಲಹೆ ಮೇರೆಗೆ ಕ್ರಿಯಾಯೋಜನೆ ತಯಾರಿಸಿ ಕ್ರಮಕೈಗೊಳ್ಳಲಾಗುವುದೆಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಸಾಂಕ್ರಾಮಿಕ ರೋಗಗಳಿಗಿಂತ ಅಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಜನರನ್ನು ಬಾಧಿಸುತ್ತಿವೆ. ಉತ್ತಮ ಜೀವನ ಶೈಲಿ ಹೊಂದಿರದಿದ್ದರೆ ಬಿಪಿ, ಶುಗರ್‌ನಂತಹ ಅಸಾಂಕ್ರಾಮಿಕ ರೋಗಗಳಿಗೆ ಅವಕಾಶ ಮಾಡಿ ಕೊಟ್ಟಂತಾಗುತ್ತದೆ ಎಂದು ತಿಳಿಸಿದರು.
ಉತ್ತಮ ಆಹಾರ ಸೇವನೆ, ವ್ಯಾಯಾಮ, ಸದಾ ಚಟುವಟಿಕೆಯಿಂದ ಇರಬೇಕು. ಧೂಮಪಾನ, ಮದ್ಯಪಾನದಂತಹ ಚಟಗಳನ್ನು ತ್ಯಜಿಸಬೇಕಿದೆ. ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡಲು ಹಾಗೂ ಇತರ ಅಂಗಾಂಗಗಳ ಆರೋಗ್ಯಕ್ಕಾಗಿ ದುಶ್ಚಟಮುಕ್ತರಾಗಿರಬೇಕೆಂದು ಸಲಹೆ ನೀಡಿದರು.
ಅಂಗವಾಡಿ ಮೇಲ್ವಿಚಾರಕಿ ಚೇತನಾ ಗೌಡ, ಹೆಣ್ಣು ಮಕ್ಕಳ ಋತುಚಕ್ರ ಮತ್ತು ವೈಯಕ್ತಿಕ ಶುಚಿತ್ವದ ಬಗ್ಗೆ ಮತ್ತು ಆಪ್ತ ಸಮಾಲೋಚಕ ಪ್ರಶಾಂತ್, ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಪೋಷಕರ ಜವಾಬ್ದಾರಿ ಕುರಿತು ಮಾತನಾಡಿದರು. ಗ್ರಾಪಂ ಕಾರ್ಯದರ್ಶಿ ಹುಚ್ಚಪ್ಪ, ಕೆಎಚ್‌ಪಿಟಿ ಸಂಯೋಜಕ ಗಣೇಶ್, ರೀಡ್ಸ್ ಸಂಸ್ಥೆಯ ಯಲ್ಲಮ್ಮ, ಅಂಗನವಾಡಿ ಕಾರ್ಯಕರ್ತೆ ರೇಖಾ, ಗಂಗಮ್ಮ, ಪೂರ್ಣಿಮಾ, ಶಿಲ್ಪಾ, ಜ್ಯೋತಿ, ಲಕ್ಷ್ಮೀ, ಸರೋಜಾ, ಜೆಸ್ಕಾಂ ಸಿಬ್ಬಂದಿ ಲೋಕೇಶ ಇತರರಿದ್ದರು.