

ಸಂಡೂರು: ತಾಲೂಕಿನಲ್ಲಿ ಆರೋಗ್ಯ ಸೇವೆ ನೀಡಲು ಶ್ರಮಿಸುತ್ತಿರುವ ಅಮೃತವಾಹಿನಿಯ ಆಂಬ್ಯುಲೆನ್ಸ್‌ಗಳ ಮೂಲಕ ಕುಡಿತದ ಕೆಡುಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಎಂದು ಶಾಸಕ ಈ. ತುಕಾರಾಂ ತಿಳಿಸಿದರು. 75ನೇ ವರ್ಷದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಉಚಿತ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಹಳ್ಳಿಗಳಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಇದನ್ನು ತಪ್ಪಿಸುವ ಕೆಲಸ ಆಗಬೇಕು. ಇದಕ್ಕಾಗಿ ತಾವು ಯಾವ ತ್ಯಾಗಕ್ಕೂ ಸಿದ್ಧ. ಇದಲ್ಲದೆ ನನ್ನ ಅಧಿಕಾರವಧಿಯಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಸಂಡೂರನ್ನು ಆರೋಗ್ಯ ತಾಲೂಕನ್ನಾಗಿ ಮಾಡಲು ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು.
ಆಯುಷ್ ಇಲಾಖೆಯಿಂದ ವಿವಿಧ ಪ್ರಾತ್ಯಕ್ಷಿಕೆ ನಡೆಸಲಾಯಿತು. ಆರೋಗ್ಯ ವೃದ್ಧಿಗೆ ಕರ್ನಾಟಕದಲ್ಲಿ ಅನೇಕ ಬದಲಾವಣೆ ತರಲು ಶರವೇಗದ ಪ್ರಯತ್ನ ನಡೆಸಿದ್ದೆವು. ತಾವು ಸಚಿವರಾಗಿದ್ದಾಗ ವಿವಿಧ ಯೋಜನೆಗಳನ್ನು ಹೊಂದಲಾಗಿತ್ತು. ಸಂಡೂರಿನಲ್ಲಿ ವಾಕರ್ ಅಸೋಷಿಯೇಷನ್ ಮಾಡಲಾಗಿದ್ದು ಆಯುಷ್ ಇಲಾಖೆಯಿಂದ ಶೀಘ್ರವೇ ಒಂದು ಯೋಗ ಕಾರ್ಯಕ್ರಮವನ್ನು ಗುರುಭವನದಲ್ಲಿ ಆಯೋಜಿಸೋಣ ಎಂದರು.
ತಾಲೂಕು ಮಟ್ಟದ ಆರೋಗ್ಯ ಮೇಳದಲ್ಲಿ ಒಟ್ಟು 539 ಜನರು ಆರೋಗ್ಯ ತಪಾಸಣೆ, ಡಿಜಿಟಲ್ ಹೆಲ್ತ್‌ಕಾರ್ಡ್ ಮತ್ತು ಆಯೂಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಪಡೆಯಲು ನೋಂದಣಿ ಮಾಡಿಸಿದ್ದಾರೆ. ಯುವಕರು, ಸ್ವಾಮಿ ವಿವೇಕಾನಂದ ಐಟಿಐ ಕಾಲೇಜಿನ 14 ವಿದ್ಯಾರ್ಥಿಗಳು ಸೇರಿ ಇತರರು 21 ಯೂನಿಟ್ ರಕ್ತವನ್ನು ದಾನ ಮಾಡಿದ್ದಾರೆ. 22 ಜನ ಎಚ್‌ಐವಿ ಟೆಸ್ಟ್ ಮಾಡಿಸಿಕೊಂಡಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಬಿಕೆಜಿ ಕಂಪನಿ ಮಾಲೀಕ ಬಿ.ನಾಗನಗೌಡ, ಉಚಿತ ಆರೋಗ್ಯ ಮೇಳಕ್ಕೆ ಅವಶ್ಯವಾದ ಔಷಧ ಮತ್ತು ಪ್ರಸಾದ ವ್ಯವಸ್ಥೆಯನ್ನು ಬಿಕೆಜಿ ಫೌಂಡೇಷನ್ ಮಾಡಿತ್ತು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಂದ ವಿವಿಧ ರೀತಿಯ ತಿನಿಸುಗಳ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಪುರಸಭೆ ಉಪಾಧ್ಯಕ್ಷ ಈರೇಶ್ ಸಿಂಧೆ, ಸದಸ್ಯ ಅಶೋಕ್ ಇತರರಿದ್ದರು.