

ಸಂಡೂರು: ತಮ್ಮ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಕರೆಯಬೇಕೆಂದು ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣಕಾರರ ಫೆಡರೇಷನ್ ಒತ್ತಾಯಿಸಿದೆ.
ಪಟ್ಟಣದ ಕಾರ್ಮಿಕ ನಿರೀಕ್ಷಕರ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿ, ಕಚೇರಿಯ ಡಿಇಒ ಪರಶುರಾಮ್ ಡಿ.ಗೆ ಮನವಿ ಸಲ್ಲಿಸಿತು. ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ವಿ.ದೇವಣ್ಣ ಮಾತನಾಡಿ, ಅರ್ಜಿ ಆಹ್ವಾನ ವಿಳಂಬವಾಗುತ್ತಿರುವುದರ ಕುರಿತು ಮಂಡಳಿ ಕಾರ್ಯದರ್ಶಿ ಜತೆ ಚರ್ಚಿಸಿದಾಗ ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆಯಿದೆ ಎಂದು ತಿಳಿಸಿದ್ದರು. ಆದರೆ, ಈವರೆಗೆ ಆ ಸಮಸ್ಯೆ ಬಗೆಹರಿದಿಲ್ಲವೇ ಎಂದು ಪ್ರಶ್ನಿಸಿದರು. ಇದಲ್ಲದೆ ಬೋಗಸ್ ಕಾರ್ಡ್‌ಗಳ ಹಾವಳಿ ಹೆಚ್ಚಾಗಿದ್ದರಿಂದಲೂ ಈ ವಿಳಂಬಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ಹೀಗೆ ಬೋಗಸ್ ಕಾರಣದಿಂದ ನೈಜ ಫಲಾನುಭವಿಗಳಿಗೆ ತೊಂದರೆ ಆಗುವುದನ್ನು ಸಹಿಸಲಾಗದು. ಒಂದು ಕಡೆ ಬೋಗಸ್ ಕಾರ್ಡ್‌ಗಳ ಕಾರಣ ನೀಡುವ ಅಧಿಕಾರಿಗಳು, ಇನ್ನೊಂದೆಡೆ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯಾಬ್, ಟೂಲ್‌ಕಿಟ್ ವಿತರಣೆ ಮಾಡುತ್ತಿದ್ದಾರೆ. ಈ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಣೆಗಳು ಕೂಡ ಬರುತ್ತಿವೆ. ಇವರೇ ತಿಳಿಸಿದಂತೆ ಈ ಕಿಟ್‌ಗಳ ಫಲಾನುಭವಿಗಳು ಕೂಡ ಬೋಗಸ್ ಕಾರ್ಡ್ ಹೊಂದಿರುವವರೇ ಆಗಿದ್ದಾರಾ ಎಂಬುದನ್ನು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.
2021-22ನೇ ಸಾಲಿನಲ್ಲೂ ರಾಜ್ಯಾಧ್ಯಂತ ಸುಮಾರು 60 ಸಾವಿರ ಅರ್ಜಿ ಹಾಕಿದ್ದು ತಾಂತ್ರಿಕ ತೊಂದರೆ ಕಾರಣವೊಡ್ಡಿ ಅಷ್ಟೂ ಜನಕ್ಕೂ ಹಣ ಪಾವತಿ ಮಾಡಿಲ್ಲ. ಕಾರಣ ಹೇಳುತ್ತ ಕೂಡದೇ ಸಮಸ್ಯೆಗೆ ಪರಿಹಾರ ಕಂಡುಕೊಂಡು ಬಡ ಕಾರ್ಮಿಕರ ಮಕ್ಕಳಿಗೆ ಹಳೆಯ ಸಹಾಯಧನ ನೀಡಿ ಮತ್ತು ಈ ಸಾಲಿನ ಅರ್ಜಿಗಳನ್ನು ಆಹ್ವಾನಿಸಬೇಕು ಎಂದು ಒತ್ತಾಯಿಸಿದರು.