

ಸಂಡೂರು: ಪಟ್ಟಣದ ತಾಲೂಕು ಆಸ್ಪತ್ರೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಬೆಳಕಿನ ವ್ಯವಸ್ಥೆ, ಸಮರ್ಪಕವಾಗಿ ಹಾಜರಾತಿ ಪುಸ್ತಕ ನಿರ್ವಹಣೆ ಮಾಡದಿರುವುದು, ಸಿಸಿ ಕ್ಯಾಮರಾ ಹಾಗೂ ಮಕ್ಕಳ ಪೌಷ್ಟಿಕ ಪುನಶ್ಚೇತನಾ ಘಟಕ ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಅಪೌಷ್ಟಿಕದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ 25 ಇದ್ದರೂ ಆಸ್ಪತ್ರೆಯಲ್ಲಿ 5 ಬೆಡ್‌ಗಳ ಮಕ್ಕಳ ಪೌಷ್ಟಿಕ ಪುನಶ್ಚೇತನಾ ಘಟಕ ಇಲ್ಲ. ದವಸ-ಧಾನ್ಯ, ತರಕಾರಿ ಇಲ್ಲ, ಬಿ-ಕಾಂಪ್ಲೆಕ್ಸ್, ಎಫ್-75, ಎಫ್-100 ಮಾತ್ರೆಗಳಿಲ್ಲ, ಅಡುಗೆ ಕೋಣೆ ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದ ಕೋಸಂಬೆ ಅವರು, ಮೂಲಸೌಕರ್ಯ ಒದಗಿಸಲು ಕ್ರಮವಹಿಸಬೇಕು. ಜಿಪಂನಲ್ಲಿ ಕರೆದಿರುವ ಸಭೆಯಲ್ಲಿ ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಅಕ್ಕಿ, ಹೆಸರು ಕಾಳು ಮಾದರಿ ಸಂಗ್ರಹಿಸಿದ ಶಶಿಧರ ಕೋಸಂಬೆ
ನಂತರ ಹಂಚಿನಾಳ ಅಂಗನವಾಡಿ ಕೇಂದ್ರಕ್ಕೆ ತೆರಳಿದ ಶಶಿಧರ ಕೋಸಂಬೆ, ಹಳದಿ, ಕೆಂಪು ವಲಯದ ಮಕ್ಕಳು ಎಷ್ಟು ಎಂದು ಪ್ರಶ್ನಿಸಿದರು. ಅದಕ್ಕೆ ಮೇಲ್ವಿಚಾರಕಿ ಶಾರದಾ ಶಿಂಧೆ ಅವರು, ಒಂದ್ಸಲ 102, ಮತ್ತೊಮ್ಮೆ 75 ಮಕ್ಕಳಿವೆ ಎಂದರೆ, ಕೆಂಪು ವಲಯದಲ್ಲಿ 9 ಮಕ್ಕಳಿದ್ದಾರೆ ಎಂದು ತಡವರಿಸುತ್ತ ಉತ್ತರಿಸಿದರು. ಮನೆಯಲ್ಲಿ ದಾಖಲಾತಿ ಇಟ್ಟುಬಂದ ಅಂಗನವಾಡಿ ಶಿಕ್ಷಕಿ ಊರಳ್ಳಿ ಚೈತ್ರಾ ಅವರಿಗೆ ನೋಟಿಸ್ ನೀಡಲು ಸಿಡಿಪಿಒ ಎಳೆ ನಾಗಪ್ಪಗೆ ಸೂಚಿಸಿದರು.
ಹಳೇ ಚಪ್ಪರದಳ್ಳಿ ಸರ್ಕಾರಿ ಕಿಪ್ರಾ ಶಾಲೆಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳು ವಲಯಮಟ್ಟದ ಪ್ರತಿಭಾ ಕಾರಂಜಿಗೆ ಹೋಗಿದ್ದರು. ಹಾಜರಾತಿ ಪರಿಶೀಲಿಸಿದ ವೇಳೆ 1 ರಿಂದ 7ನೇ ತರಗತಿವರೆಗಿನ ಒಟ್ಟು 24 ಮಕ್ಕಳ ದಾಖಲಾತಿಯಿದ್ದು, ಅದರಲ್ಲಿ ವಿದ್ಯಾರ್ಥಿಗಳ ಹಾಜರಾತಿ ಇತ್ತು. ಮಕ್ಕಳ ಹಕ್ಕುಗಳ ಸಂಘ ಇಲ್ಲದಿರುವುದ, ದೂರು ಪೆಟ್ಟಿಗೆ, ಸಹಾಯವಾಣಿ ನಂಬರ್ (1098) ಕೂಡಾ ಎಲ್ಲೂ ಹಚ್ಚಿರಲಿಲ್ಲ. ಪ್ರಭಾರ ಮುಖ್ಯಶಿಕ್ಷಕ ಚೌಕಳಿ ಪರಶುರಾಮಪ್ಪ, ಹಾಜರಾತಿ ಹಾಕದೆ ಹೋಗಿದ್ದರು. ಹೀಗಾಗಿ ಅವರಿಗೆ ನೋಟಿಸ್ ನೀಡುವಂತೆ ಬಿಇಒಗೆ ಕರೆ ಮಾಡಿ ತಿಳಿಸಿದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಮಶೆಟ್ಟಿ, ಡಿಸಿಪಿಒ ಎಂ.ರಾಮಕೃಷ್ಣ ನಾಯಕ, ಬಳ್ಳಾರಿ ನಗರ ಸಿಡಿಪಿಒ ನಾಗರಾಜ್, ಈಶ್ವರರಾವ್ ಇತರರಿದ್ದರು.