

ಸಂಡೂರು: ತೋರಣಗಲ್ ಗ್ರಾಮದಲ್ಲಿ ಬೃಹತ್ ಕೈಗಾರಿಕೆಗಳಿದ್ದರೂ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬಳ್ಳಾರಿ ಮತ್ತು ಹೊಸಪೇಟೆಯಂಥ ಊರುಗಳಿಗೆ ಹೋಗುವ ಅನಿವಾರ್ಯ ಎದುರಾಗಿದೆ ಎಂದು ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯ ಶಿವರೆಡ್ಡಿ ಹೇಳಿದರು.
ತೋರಣಗಲ್ ಗ್ರಾಮದ ಸ.ನಂ. 60ರಲ್ಲಿ ಪೊಲೀಸ್ ಇಲಾಖೆಗೆ ಭೂಮಿ ನೀಡಬಾರದು ಮತ್ತು ಅದೇ ಜಾಗದಲ್ಲಿ ಐಟಿಐ, ಪಿಯುಸಿ ಕಾಲೇಜು ಕಟ್ಟಡ ನಿರ್ಮಿಸಬೇಕೆಂದು ಒತ್ತಾಯಿಸಿ ಎಸ್‌ಎಫ್‌ಐನಿಂದ ಗ್ರೇಡ್-2 ತಹಸಿಲ್ದಾರ್ ಸುಧಾ ಅರಮನೆಗೆ ಮನವಿ ಸಲ್ಲಿಸಿ ಮಾತನಾಡಿದರು.
ತೋರಣಗಲ್ ಗ್ರಾಮಕ್ಕೆ ಸರ್ಕಾರಿ ಐಟಿಐ ಮತ್ತು ಪಿಯುಸಿ ಕಾಲೇಜು ಬೇಕೆಂದು ಪತ್ರ ಚಳವಳಿ ಮತ್ತು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರ ಫಲವಾಗಿ ಐಟಿಐ, ಸ್ವತಂತ್ರ ಪದವಿ ಪೂರ್ವ ಕಾಲೇಜು ಮಂಜೂರಾಗಿದೆ. ಈ ಕಟ್ಟಡವನ್ನು ಸಂಡೂರಿನ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸ.ನಂ.60ರಲ್ಲಿ ನಿರ್ಮಿಸಬೇಕೆಂದು ಆಗ್ರಹಿಸಿದರು.
ಕಾಲೇಜು ಕಟ್ಟಡಕ್ಕೆ ಜಿಲ್ಲಾಡಳಿತದಿಂದ ಈಗಾಗಲೇ 2.85ಎಕರೆ ಜಮೀನು ನೀಡಲಾಗಿದೆ. ಆದರೆ, ಸರ್ಕಾರ ಪೊಲೀಸ್ ಇಲಾಖೆಗೆ ಜಾಗ ನೀಡಬೇಕೆಂದು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗದ ಸ್ಥಳದಲ್ಲಿ ಕಾಲೇಜುಗಳನ್ನು ನಿರ್ಮಿಸಲು ತಯಾರಿ ನಡೆಸುತ್ತಿದೆ.
ಈ ಕ್ರಮ ಸರಿಯಲ್ಲ. ಒಂದು ವೇಳೆ ಭೂಮಿಯನ್ನು ಪೊಲೀಸ್ ಇಲಾಖೆಗೆ ನೀಡಿದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.