ಮತೀಯ ರಾಜಕಾರಣ ಕಾರ್ಮಿಕ ವರ್ಗದ ಐಕ್ಯತೆಗೆ ಧಕ್ಕೆ ಎಂದ ಸಿಐಟಿಯುನ ಕಾರ್ಯದರ್ಶಿ ಆರ್.ಎಸ್.ಬಸವರಾಜ ಆರೋಪ

15102022 Sandur citu sammelana
Published on

ಸಂಡೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೇಗವಾಗಿ ಹೊಸ ಆರ್ಥಿಕ ನೀತಿ ಜಾರಿ ಪರಿಣಾಮವಾಗಿ ದುಡಿಯುವ ಜನರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಸಿಐಟಿಯುನ ಕಾರ್ಯದರ್ಶಿ ಆರ್.ಎಸ್.ಬಸವರಾಜ ದೂರಿದರು.

ಸ್ಥಳೀಯ ಯು.ತಿಪ್ಪೇಸ್ವಾಮಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಡೂರು ತಾಲೂಕು 5ನೇ ಸಮ್ಮೇಳನ
ಉದ್ಘಾಟಿಸಿ ಮಾತನಾಡಿದರು. ಕೋಮುವಾದ-ಕಾರ್ಪೊರೇಟ್ ಅಕ್ರಮ ಜೋಡಿ, ದೇಶದ ಆರ್ಥಿಕತೆಯನ್ನು ಅಪಾಯದ ಅಂಚಿಗೆ ತಳ್ಳಿದೆ. ಜತೆಗೆ ದೇಶದ ಸೌಹಾರ್ದ, ಜಾತ್ಯತೀತ ಪರಂಪರೆಗೆ ಸವಾಲೊಡ್ಡಿರುವುದನ್ನು ಕಾಣುತ್ತದೆ. ಅಖಿಲ ಭಾರತ ಮುಷ್ಕರಗಳ ಮೂಲಕ ಆಳುವ ವರ್ಗಕ್ಕೆ ನಮ್ಮ ಸಂಘವು ಬಿಸಿ ಮುಟ್ಟಿಸುವ ಕೆಲಸ ಮಾಡುತ್ತ ಬಂದಿದೆ. ಕಾರ್ಮಿಕರ ವಿರೋಧದ ನಡುವೆಯೂ ಪ್ರಸ್ತುತ ಸರ್ಕಾರಗಳು ಕಾರ್ಮಿಕ ಕಾಯ್ದೆಗಳನ್ನು ಜಾರಿಗೊಳಿಸಿವೆ. ಸಂವಿಧಾನ ವಿರೋಧಿ ಮತೀಯ ರಾಜಕಾರಣ ಕಾರ್ಮಿಕ ವರ್ಗದ ಐಕ್ಯತೆಗೆ ಧಕ್ಕೆ ತಂದಿದೆ. ಜನರ ನೈಜ ಸಮಸ್ಯೆಗಳನ್ನು ಮರೆಮಾಚಿ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು ದೇಶದ ಸಂಪತ್ತನ್ನು ಕಾರ್ಪೊರೇಟೀಕರಣ ಮಾಡಲಾಗುತ್ತಿದೆ. ಬಡತನ, ನಿರುದ್ಯೋಗ, ಬೆಲೆ ಏರಿಕೆ ಹೆಚ್ಚುತ್ತಿರುವ ಸಂದಿಗ್ಧ ಕಾಲದ ಅವಲೋಕಕ್ಕಾಗಿ ಸಿಐಟಿಯು ಅ.29 ಹಾಗೂ 30ರಂದು ಎರಡು ದಿನ 10ನೇ ಸಮ್ಮೇಳನ ಈ ಬಾರಿ ಗಣಿನಾಡು ಸಂಡೂರಿನಲ್ಲಿ ಹಮ್ಮಿಕೊಂಡಿದೆ ಎಂದರು.

ಸಿಐಟಿಯು ತಾಲೂಕು ಸಂಚಾಲಕ ಜೆ.ಎಂ.ಚೆನ್ನಬಸಯ್ಯ ಮಾತನಾಡಿ, ಕಲ್ಯಾಣ ಕರ್ನಾಟಕ ಹೆಸರಿನಲ್ಲಿ ಕೋಟ್ಯಂತರ ರೂ. ನಿಧಿ ಹರಿದು ಬಂದರೂ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸದ್ಬಳಕೆಯಾಗುತ್ತಿಲ್ಲ. ಕೆಲಸ ಕಳೆದುಕೊಳ್ಳುವ ಗಣಿ, ಗುತ್ತಿಗೆ ಕಾರ್ಮಿಕರಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ. ಬಡತನ, ಅನಕ್ಷರತೆ, ಅಪೌಷ್ಟಿಕತೆ, ನಿರುದ್ಯೋಗ ಸಾಮಾಜಿಕ ಪಿಡುಗುಗಳಿಂದ ಸಂಡೂರು ಹಿಂದುಳಿದೆ ಎಂದರು.

ಜಿಲ್ಲಾಧ್ಯಕ್ಷ ಭಾಸ್ಕರ್‌ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯಬಾಬು ಮಾತನಾಡಿದರು. ವಿ.ದೇವಣ್ಣ, ಎಂ.ಮಲ್ಲಿಕಾರ್ಜುನ ಸ್ವಾಮಿ, ಬಾಬಯ್ಯ, ಕಾಲೂಬ, ಎಚ್‌ಎಂ.ರೇಖಾ, ದ್ರಾಕ್ಷಾಯಣಿ, ಕೃಷ್ಣ್ಣನಾಯ್ಕ, ಗಂಗಮ್ಮ ಲಿಂಗದಹಳ್ಳಿ, ರೇಖಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net