

ಸಂಡೂರು: ಸಂಡೂರಿನಲ್ಲಿ 2007-08ರಲ್ಲಿ ಅಕ್ರಮ ಗಣಿಗಾರಿಕೆ ನಡೆಯುವ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ಸಂವಿಧಾನ ಅನುಷ್ಠಾನವಿರಲಿಲ್ಲ. ಸುಮಾರು 10 ಸಾವಿರ ಅದಿರು ಲಾರಿಗಳು ಸಂಡೂರಿಂದ ಮಂಗಳೂರು, ಚೆನ್ನೈ, ಕಾರವಾರ ಮುಂತಾದೆಡೆಗಳಿಗೆ ಅದಿರು ಸಾಗಾಟವಾಗಿತ್ತು ಎಂದು ಸಮಾಜ ಪರಿವರ್ತನಾ ಸಮುದಾಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ ಹೇಳಿದರು.
ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಜನಸಂಗ್ರಾಮ ಪರಿಷತ್ತಿನಿಂದ ಗಣಿ ಭಾಧಿತ ಬದುಕು ಮತ್ತು ಪರಿಸರ ಪುನಶ್ಚೇತನ ಸಂಕಲ್ಪ ಸಮಾವೇಶದಲ್ಲಿ ಬುಧವಾರ ಮಾತನಾಡಿದರು.
2008ರಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ವರದಿ ನೀಡಿದ್ದರು. ಅದನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಯಿತು. ಆ ವರದಿ ಆಧಾರದ ಮೇಲೆ ಸಿಇಸಿ ತಂಡ ರಚಿಸಿ ಅಕ್ರಮ ಗಣಿಗಾರಿಕೆ ಮೇಲೆ ದಾಳಿಗಳಾಗಿ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ಬಂತು. ಗಣಿಗಾರಿಕೆಯಿಂದ ನಲುಗಿದ ಜನರ ಮಾನವೀಯ ವಿಕಾಶ ಆಗಬೇಕು ಅವರ ಬದುಕು ಉಜ್ವಲ ಆಗಬೇಕು ಆದಾಯ, ಆರೋಗ್ಯ, ಕೃಷಿ, ಶಿಕ್ಷಣ, ಪಶುಸಂಗೋಪನೆ ಸೇರಿ ಎಲ್ಲ ಕ್ಷೇತ್ರಗಳಲ್ಲೂ ರೈತರ ಬದುಕು ಹಸನಾಗಬೇಕು. ಆದಕ್ಕಾಗಿ ಅದಿರು ತೆರಿಗೆ ಹಣ 32 ಸಾವಿರ ಕೋಟಿ.ರೂ. ಸದ್ಬಳಕೆಯಾಗಬೇಕು ಎಂದು ಒತ್ತಾಯಿಸಿದರು.
ಕುದುರೆಮುಖ ಅದಿರು ಗಣಿಗಾರಿಕೆಯನ್ನು ಮಂಗಳೂರಲ್ಲಿ ನಿಲ್ಲಿಸಲಾಗಿತ್ತು. ಭದ್ರಾವತಿ ವಿಎಸ್‌ಎಲ್ ಅವರು ಸಹ ಬರುತ್ತಿದ್ದಾರೆ. ಇದೀಗ ಅವರಿಗೆ 1ಲಕ್ಷಕ್ಕೂ ಹೆಚ್ಚು ಮರಗಿಡಗಳನ್ನು ಕಡಿದು ಗಣಿಗಾರಿಕೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಸಂಡೂರು ಉತ್ತರ ಕರ್ನಾಟಕದ ಆಕ್ಷಿಜನ್ ಬ್ಯಾಂಕ್ ಇದ್ದಂತೆ. ಇದನ್ನು ಉಳಿಸಬೇಕಿದೆ. ಪರಿಸರ ಪುನಶ್ಚೇತನವಾಗಬೇಕು. ಪ್ರಕೃತಿ ಮಾತೆ ಮೇಲಿನ ದಾಳಿ ನಿಲ್ಲಬೇಕು. ಸಂಡೂರಲ್ಲಿ ಇದೇ ರೀತಿ ಕಬ್ಬಿಣ ಅದಿರನ್ನು ತೋಡಿದಲ್ಲಿ 32 ವರ್ಷದಲ್ಲಿ ಎಲ್ಲ ಖಾಲಿಯಾಗುತ್ತದೆ ಎಂನುದು ಪರಿಸರ ತಜ್ಞರಾದ ನಾಗೇಶ್ ಹೆಗಡೆ, ಮಾದವ ಗಾಡ್ಗಿಳ್‌ರೊಂದಿಗೆ ಸಮಾಲೋಚನೆ ಮಾಡಲಾಗಿದೆ. ಗಣಿಗಾರಿಕೆ ನಿಂತರೆ ಬಹಳ ಒಳ್ಳೆಯದು. ಅದಕ್ಕಾಗಿ ಹೊಸ ಅದಿರು ನೀತಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಪರಿಸರ ತಜ್ಞ ನಾಗೇಶ್ ಹೆಗಡೆ ಜಾಗತಿಕ ತಾಪಮಾನ ಮತ್ತು ನಿಯಂತ್ರಣದ ಬಗ್ಗೆ ಮಾತನಾಡಿ, ಮಹಾತ್ಮ ಗಾಂಧೀಜಿ 90 ವರ್ಷಗಳ ಹಿಂದೆ ಸಂಡೂರಿಗೆ ಬಂದು ಕೆಳಮಟ್ಟದ ಜನರಿಗೆ ಪ್ರಾತಿನಿಧ್ಯ ಕೊಟ್ಟು ಸಮಾನತೆ ಸಾರಿದ್ದರು. ಆದರೆ ಇದೀಗ ಕೆಲವರಿಗೆ ವಿಮಾನವಿದ್ದರೆ ಕೆಲವರಿಗೆ ಹಾಕಿಕೊಳ್ಳಲು ಚಪ್ಪಲಿ ಸಹ ಇಲ್ಲ ಕೆಲವರಿಗೆ ಚಿನ್ನದ ತಟ್ಟೆ ಇದ್ದರೆ, ಹಲವರ ತಟ್ಟೆಗಳಿಗೆ ಮಣ್ಣು ಬೀಳುತ್ತಿದೆ ಇದು ನಾಡಿನ ದುರಂತ. ಜಾಗತೀಕ ತಾಪಮಾನ, ಸಮುದ್ರಮಟ್ಟ ಏರಿಕೆ, ತಂತ್ರಜ್ಞಾನ, ನ್ಯೂಕ್ಲಿಯರ್ ಮುಂತಾದ ವಿಷಯಗಳ ಬಗ್ಗೆ ತಿಳಿಸಿದರು.
ಜಸಂಪ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಠಗಿ, ಅಧ್ಯಕ್ಷತೆವಹಿಸಿದ್ದ ಜಸಂಪ ಜಿಲ್ಲಾ ಸಂಚಾಲಕ ಚಾಗನೂರು ಮಲ್ಲಿಕಾರ್ಜುನರೆಡ್ಡಿ, ಶಿವಮೊಗ್ಗ ಜಸಂಪ ಜಿಲ್ಲಾಧ್ಯಕ್ಷ ಅಖಿಲೇಶ್ ಚಿಪ್ಳಿ, ಶಿಶ್ರಶೈಲ ಆಲ್ದಳ್ಳಿ ಮಾತನಾಡಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕರೂರು ಮಾಧವರೆಡ್ಡಿ, ವನ್ಯಜೀವಿ ಸಂರಕ್ಷರಕ ಸಂತೋಷ್ ಮಾರ್ಟಿನ್, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಹಂಪಿ ವಿವಿಯ ನಿವೃತ್ತ ಪ್ರಾಧ್ಯಾಪಕ ಟಿ.ಆರ್.ಚಂದ್ರಶೇಖರ್, ಜಸಂಪ ಅಧ್ಯಕ್ಷ ಟಿ.ಎಂ.ಶಿವಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಎಂಎಲ್‌ಕೆ.ನಾಯ್ಡು, ಜಿ.ಕೆ.ನಾಗರಾಜ್, ಸೋಮಶೇಖರಗೌಡ, ಕಾಶಪ್ಪ ಇತರರಿದ್ದರು.