ಸ್ಪಾಂಜ್ ಐರನ್ ಕಾರ್ಖಾನೆಯಿಂದ ಬೆಳೆ ನಷ್ಟ

Sandur Memorandam
ಸಂಡೂರಿನಲ್ಲಿ ತಹಸೀಲ್ದಾರ್ ಅನಿಲ್ ಕುಮಾರ್‌ಗೆ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ, ಜನ ಸಂಗ್ರಾಮ ಪರಿಷತ್ ಪದಾಧಿಕಾರಿಗಳು ಶನಿವಾರ ಮನವಿ ಸಲ್ಲಿಸಿದರು. ಪ್ರಮುಖರಾದ ಕರೂರು ಮಾಧವರೆಡ್ಡಿ, ಟಿ.ಎಂ.ಶಿವಕುಮಾರ್, ಎ.ಜಿ.ಶ್ರೀಶೈಲ ಇತರರಿದ್ದರು.
Published on

ಸಂಡೂರು: ತಾಲೂಕಿನ ನರಸಿಂಗಾಪುರ ಗ್ರಾಪಂ ವ್ಯಾಪ್ತಿಯ ರಣಜೀತ್‌ಪುರ ಸ್ಪಾಂಜ್ ಐರನ್ ಕಾರ್ಖಾನೆ ತ್ಯಾಜ್ಯದಿಂದ ಕೃಷಿಗೆ ಹಾನಿಯಾಗುತ್ತಿದ್ದು, ಸಮೀಕ್ಷೆ ನಡೆಸಬೇಕೆಂದು ಒತ್ತಾಯಿಸಿ ರೈತಸಂಘ ಹಾಗೂ ಹಸಿರು ಸೇನೆ, ಜನ ಸಂಗ್ರಾಮ ಪರಿಷತ್ ಪದಾಧಿಕಾರಿಗಳು ಶನಿವಾರ ತಹಸೀಲ್ದಾರ್ ಜಿ.ಅನಿಲ್ ಕುಮಾರ್, ಕೃಷಿ ಇಲಾಖೆ ಎಡಿ ಮಂಜುನಾಥರೆಡ್ಡಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಕರೂರು ಮಾಧವರೆಡ್ಡಿ ಮಾತನಾಡಿ, ಕಾರ್ಖಾನೆಯ ವಿಷಕಾರಿ ಧೂಳು ಕೃಷಿ ಭೂಮಿ, ಕಾಡಿನ ಗಿಡಮರಗಳ ಮೇಲೆ ಬೀಳುತ್ತಿದೆ. ಅಂತಹ ಸಸಿಗಳನ್ನು ಜಾನುವಾರುಗಳು ತಿನ್ನುವುದರಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಜನರು ಚರ್ಮ, ಅಸ್ತಮಾ, ಕ್ಯಾನ್ಸರ್, ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ಈಡಾಗುತ್ತಿದ್ದಾರೆ.

ಕಣಿವೆ ಪ್ರದೇಶಗಳಿಂದ 3ನಾಲೆಗಳ ಮೂಲಕ ನಾರಿಹಳ್ಳಕ್ಕೆ ಹರಿದು ಬರುವ ನೀರಿಗೆ ಅಡ್ಡಲಾಗಿ ಚೆಕ್‌ಡ್ಯಾಂ ನಿರ್ಮಿಸಿ ಉದ್ಯಮಕ್ಕೆ ಬಳಸಿಕೊಳ್ಳಲಾಗುತ್ತಿದೆ. ಚೆಕ್‌ಪೋಸ್ಟ್ ಸ್ಥಾಪಿಸಿ ಕಬ್ಬಿಣದ ಗೇಟ್ ಅಳವಡಿಸಿವುದರಿಂದ ರೈತರ ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಿದ್ದು, ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಕಾರ್ಖಾನೆಯು ಉದ್ದಿಮೆ ಪರವಾನಗಿ ಪಡೆಯದ ಕಾರಣ ಸ್ಪಾಂಜ್ ಐರನ್ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲು ನರಸಿಂಗಾಪುರ ಗ್ರಾಪಂ ನಿರ್ಧರಿಸಿದೆ. ಕಾರ್ಖಾನೆಯಿಂದಾದ ಬೆಳೆನಷ್ಟ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ಕೊಡಿಸುವಂತೆ ಅಗ್ರಹಿಸಿದರು.

ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ಟಿ.ಎಂ.ಶಿವಕುಮಾರ್, ಮುಖಂಡರಾದ ಶ್ರೀಶೈಲ ಆಲದಳ್ಳಿ, ಜಿ.ಕೆ.ನಾಗರಾಜ್, ವಿಶ್ವನಾಥ, ಮೂಲೆಮನೆ ಈರಣ್ಣ, ಕಾಡಪ್ಪ, ಪರಮೇಶ್ವರಪ್ಪ, ಕೆ.ಬಿ.ಮೌನೇಶ್, ಆಗಲೂರು ಗಂಗಣ್ಣ, ಪಂಪಾಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net