

ಸಂಡೂರು: ತಾಲೂಕಿನ ಸಿದ್ದಾಪುರ-ಜಯಸಿಂಗಾಪುರ ನಡುವೆ ಇತ್ತೀಚಿಗೆ ನಡೆದ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐದು ಜನ ಮೃತಪಟ್ಟಿದ್ದು, ಮೈನಿಂಗ್ ಲಾರಿಗಳಿಗೆ ಕಡಿವಾಣ ಹಾಕಬೇಕೆಂದು ರೈತ ಸಂಘದ ಕಕ ವಿಭಾಗೀಯ ಕಾರ್ಯದರ್ಶಿ ಎಂ.ಎಲ್.ಕೆ.ನಾಯ್ಡು ಆಗ್ರಹಿಸಿದರು.
ಪಟ್ಟಣದ ತಾಲೂಕು ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಬುಧವಾರ ಮಾತನಾಡಿದರು. ತಾಲೂಕಿನಲ್ಲಿ ಅದಿರು ಸಾಗಣೆಗೆ ಜಿಲ್ಲಾ ಖನಿಜ ನಿಧಿಯಡಿ ಪ್ರತ್ಯೇಕ ರಸ್ತೆ ನಿರ್ಮಿಸಬೇಕು.
ಸಂಡೂರು-ಹೊಸಪೇಟೆ, ಸಂಡೂರು-ತೋರಣಗಲ್, ಕೂಡ್ಲಿಗಿ, ನಾರಾಯಣಪುರ, ಬನ್ನಿಹಟ್ಟಿ, ತಾರಾನಗರ ಸೇರಿದಂತೆ ವಿವಿಧೆಡೆ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು. ಅದಿರು ಲಾರಿಗಳ ವೇಗಮಿತಿಯನ್ನು ಗಂಟೆಗೆ 30 ಕಿ.ಮೀ.ಗೆ ನಿಗದಿಪಡಿಸಬೇಕು.
ಮೈನ್ಸ್ ಲಾರಿಗಳಿಗೆ ಇಂಟರ್‌ಸೆಪ್ಟೆರ್ ಅಳವಡಿಸಬೇಕು. ಮೈನಿಂಗ್ ಹಾವಳಿಯಿಂದಾಗಿ ಸಾರ್ವಜನಿಕರು ಓಡಾಡದಂತಾಗಿದೆ ಎಂದು ದೂರಿದರು.
ಹೊಸಪೇಟೆ, ಕೂಡ್ಲಿಗಿ, ತೋರಣಗಲ್ ಸೇರಿದಂತೆ ನಾನಾ ಕಡೆ ಹೋಟೆಲ್, ಅಂಗಡಿಗಳಲ್ಲಿ ಮದ್ಯದ ಅಕ್ರಮ ಮಾರಾಟ ತಡೆಯಬೇಕು.
ಚಾಲಕರ ಸಮವಸ್ತ್ರ, ಚಾಲನಾ ಪರವಾನಗಿ, ವಿಮೆ ಇಲ್ಲದಿದ್ದಲ್ಲಿ ಲೋಡ್ ಕೊಡಬಾರದು. ಕುಡಿದು ಲಾರಿ ಓಡಿಸುವವರನ್ನು ಮತ್ತು ಲಾರಿಯನ್ನು ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಬಳಿಕ ತಹಸೀಲ್ದಾರ್ ಅನಿಲ್‌ಕುಮಾರಗೆ ಮನವಿ ಸಲ್ಲಿಸಲಾಯಿತು.