

ಸಂಡೂರು: ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು 1986ರಲ್ಲಿ ಶರಣ ಸಾಹಿತ್ಯ ಪರಿಷತ್ ಹುಟ್ಟು ಹಾಕಿ, ಶರಣ ಸಂಸ್ಕೃತಿ ಉತ್ಸವ ಪ್ರತಿ ಮನೆಗೆ ಮುಟ್ಟುವಂತೆ ಮಾಡಿದರು ಎಂದು ವಿರಕ್ತಮಠದ ಪ್ರಭು ಸ್ವಾಮೀಜಿ ಹೇಳಿದರು.
ಶಸಾಪ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಪಟ್ಟಣದಲ್ಲಿ ಸಂಡೂರು ತಾಲೂಕು ಶಸಾಪ, ಕದಳಿ ಮಹಿಳಾ ವೇದಿಕೆ ಹಮ್ಮಿಕೊಂಡಿದ್ದ 52ನೇ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸುತ್ತೂರು ಶ್ರೀಗಳು, ಅಲ್ಲಮ ಪ್ರಭುಗಳ ವಚನ ನಿರ್ವಚನ ಎಂಬ ಪುಸ್ತಕ ಸೇರಿ ಅನೇಕ ಮಹಾನ್ ಕೃತಿಗಳನ್ನು ಹೊರ ತಂದರು. ಎಫ್‌ಎಂ ರೇಡಿಯೋ ಆರಂಭಿಸಿ ವಚನ ಸಾಹಿತ್ಯವನ್ನು ಪ್ರಚುರಪಡಿಸುತ್ತಿದ್ದಾರೆ ಎಂದರು. 12ನೇ ಶತಮಾನದಲ್ಲಿ ಶರಣು ಎಂದರೆ ಶರಣು ಶರಣಾರ್ಥಿ ಎಂಬ ಪದ ಹುಟ್ಟು ಹಾಕಿ ಭಕ್ತಿಯಲ್ಲಿ ಕೂಡ ಸಾಮಾಜಿಕ ನ್ಯಾಯವನ್ನು ಬಸವಾದಿ ಶಿವಶರಣರು ಹುಟ್ಟು ಹಾಕಿದ ಎಂದರು.
ಉಪನ್ಯಾಸಕ ಕೆ.ತಿಪ್ಪೇರುದ್ರಪ್ಪ ಮಾತನಾಡಿ, ವೈಚಾರಿಕತೆ, ಕಂದಾಚಾರ ತೊಲಗಿಸಿ ಭಕ್ತಿಯ ತಳಹದಿಯ ಮೇಲೆ ಜೀವನವನ್ನು ಹೇಗೆ ಕಟ್ಟಬೇಕೆಂಬುದನ್ನು ವಚನಕಾರರು ತೋರಿಸಿಕೊಟ್ಟಿದ್ದಾರೆ ಎಂದರು.
ಶಸಾಪ ತಾಲೂಕು ಅಧ್ಯಕ್ಷ ಬಿ.ನಾಗನಗೌಡ ಮಾತನಾಡಿದರು. ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ನೀಲಾಂಬಿಕಾ, ತಾಲೂಕು ಅಧ್ಯಕ್ಷೆ ಕುಸುಮಾ ಹಿರೇಮಠ, ಬಸವರಾಜ ಮಸೂತಿ, ಸಿ.ಎಂ.ಶಿಗ್ಗಾಂವಿ, ಹಗರಿ ಬಸವರಾಜಪ್ಪ, ಚಂದ್ರಶೇಖರಪ್ಪ, ಸುರೇಂದ್ರನಾಥ್, ವೆಂಕಟಸುಬ್ಬಯ್ಯ, ಸೋವೇನಹಳ್ಳಿ ಎ.ಎಂ.ಶಿವಮೂರ್ತಿ ಸ್ವಾಮಿ, ಜ್ಞಾನಭಾರತಿ ಕುಮಾರಸ್ವಾಮಿ, ಮುಖ್ಯಶಿಕ್ಷಕ ಮಹಾಂತೇಶ, ಗಾಣಿಗರ ವೀರೇಶ್ ಇತರರಿದ್ದರು. ಕಲಾವಿದರಾದ ಟಿ.ವೆಂಕಟೇಶ್, ಲಕ್ಷ್ಮೀಪುರ ಕೆ.ಉಮೇಶಾಚಾರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.